ಸಚಿವ ನಿರಾಣಿ ಕಿರಿಕ್- ಬಿಜೆಪಿ ಶಾಸಕ ಪಟ್ಟಣಶೆಟ್ಟಿ ರಾಜೀನಾಮೆ

ಶುಕ್ರವಾರ, 6 ಏಪ್ರಿಲ್ 2012 (11:44 IST)
PR
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕುತಂತ್ರ ರಾಜಕಾರಣಿದಿಂದ ಅಸಮಾಧಾನಗೊಂಡ ನಗರದ ಶಾಸಕ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತಮ್ಮ ರಾಜೀನಾಮೆಯನ್ನು ಸ್ಪೀಕರ್ ಕೆ.ಜಿ.ಬೋಪಯ್ಯನವರಿಗೆ ಸಲ್ಲಿಸಿದ್ದರೂ ಕೂಡ ಅದಿನ್ನೂ ಸ್ವೀಕಾರವಾಗಿಲ್ಲ. ಪಕ್ಷದಲ್ಲಿ ಪಟ್ಟಣಶೆಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಿರಾಣಿ ಕಡೆಗಣಿಸುತ್ತಿದ್ದಾರಲ್ಲದೆ, ಕಡುವೈರಿ ಜೆಡಿಎಸ್‌ನ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ್ ಯತ್ನಾಳರ ಮನೆಗೆ ಊಟಕ್ಕೆ ಹೋಗುವುದು, ಕಾಂಗ್ರೆಸ್ ಶಾಸಕರು, ಧುರೀಣರ ಜೊತೆಗೆ ಕೈ ಜೋಡಿಸುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣಶೆಟ್ಟಿ ರಾಜೀನಾಮೆ ನೀಡಿದ್ದಾರೆ.

ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ವಿಧಾನಸಭೆ ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಹತ್ತು ದಿನ ಗಡುವು ನೀಡಿದ್ದು, ಅಷ್ಟರಲ್ಲಿಯೇ ಜಿಲ್ಲೆಯ ರಾಜಕಾರಣವನ್ನು ವರಿಷ್ಠರು ಸರಿಪಡಿಸಿದರೆ ಸರಿ, ಇಲ್ಲವಾದರೆ ತಾವು ಶಾಸಕ ಸ್ಥಾನದ ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟಣಶೆಟ್ಟಿ ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ನಗರದ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಗುರುವಾರ ಬಂದಿಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಲ್ನಡಿಗೆಯಲ್ಲಿ ಪ್ರವಾಸಿ ಮಂದಿರಕ್ಕೆ ತೆರಳುತ್ತಿದ್ದಾಗ ಬಿಜಾಪುರ ನಗರ ಶಾಸಕ ಅಪ್ಪಾ ಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರು ಘೇರಾವ್ ಹಾಕಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಬದಲಿಸುವಂತೆ ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ