ಸಿಎಂ ಬರ್ಲಿ, ಬಿಡ್ಲಿ, ನಾನಂತೂ ಧರ್ಮಸ್ಥಳಕ್ಕೆ ಹೋಗ್ತೀನಿ: ಎಚ್‌ಡಿಕೆ

ಶುಕ್ರವಾರ, 24 ಜೂನ್ 2011 (15:44 IST)
ಸಿಎಂ ಬರಲಿ, ಬಿಡಲಿ, ನಾನಂತೂ ಮನಃ ಸಾಕ್ಷಿಯಂತೆ ಧರ್ಮಸ್ಥಳಕ್ಕೆ ಹೋಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಯ ಮುಂದೆ ಆಣೆ ಪ್ರಮಾಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಪತ್ರಿಕಾ ಜಾಹೀರಾತಿನ ಮೂಲಕ ಆಹ್ವಾನ ನೀಡಿದ್ದರು. ತಾವು ಅಲ್ಲಿಗೆ ಹೋಗದಿದ್ದರೆ ಜನತೆಗೆ ಸಂಶಯ ಬರುತ್ತದೆ. ಈ ನಿಟ್ಟಿನಲ್ಲಿ ತಾವು ಧರ್ಮಸ್ಥಳಕ್ಕೆ ತೆರಳುವುದಾಗಿ ಹೇಳಿರುವ ಕುಮಾರಸ್ವಾಮಿ, ಈ ಕುರಿತು ಜೂ.19ರಂದೇ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಆಣೆ, ಪ್ರಮಾಣ ಮಾಡುವಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರೂ ಆಹ್ವಾನ ನೀಡಿದ್ದರು. ಅಂದು ತಾವದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಈಗ ಆಣೆ ಪ್ರಮಾಣಕ್ಕೆ ಮುಂದಾಗದಿದ್ದರೆ, ಜನರು ತಮಗೆ ಮಾತಿಗೆ ತಪ್ಪಿದವ ಎಂಬ ಪಟ್ಟ ನೀಡುತ್ತಾರೆ. ಈ ರೀತಿ ತಮಗೆ ಕೆಟ್ಟ ಹೆಸರು ತರುವ ಬಿಜೆಪಿಯ ಸಂಚು ಯಶಸ್ವಿಯಾಗಲು ಖಂಡಿತಾ ಬಿಡಲಾರೆ ಎಂದು ಸ್ಪಷ್ಟಪಡಿಸಿದರು.

ಆಣೆ ಪ್ರಮಾಣದ ಕುರಿತು ವಿವಿಧ ಕ್ಷೇತ್ರದ ಗಣ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈ ಎಲ್ಲರ ಅಭಿಪ್ರಾಯಗಳನ್ನೂ ತಾವು ಸ್ವಾಗತಿಸುವುದಾಗಿ ಅವರು ಹೇಳಿದರಾದರೂ, ತಮ್ಮೊಂದಿಗೆ ರಾಜಿ ಸಂಧಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಮೂಲಕ ಪ್ರಯತ್ನ ಮಾಡಿದ್ದರು ಎಂದು ಪುನರುಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ