ಸಿದ್ದರಾಮಯ್ಯ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ರೆಡ್ಡಿ

ಶುಕ್ರವಾರ, 3 ಜುಲೈ 2009 (15:40 IST)
NRB
'ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರು ಬಳ್ಳಾರಿ ಮತ್ತು ಬಿಜೆಪಿ ಬಗ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ' ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಧಮಕಿ ಹಾಕಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳ ಸಭೆ ಮತ್ತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಳ್ಳಾರಿ ಭೇಟಿ ನೀಡಿದ್ದ ಸಿದ್ದರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 2,500ಮತಗಳಿಂದ ಗೆಲುವು ಸಾಧಿಸಿದ್ದರೂ ಕೂಡ, ಕಾಂಗ್ರೆಸ್ ನೈತಿಕವಾಗೆ ಜಯ ಸಾಧಿಸಿದೆ ಎಂದು ಹೇಳಿಕೆ ನೀಡಿದ್ದರು.

ಸಿದ್ದರಾಮಯ್ಯ ಅವರ ಹೇಳಿಕೆ ಇಂದು ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ ರೆಡ್ಡಿ, ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಬಳ್ಳಾರಿಯ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ತಾನು ಏನು ಮಾತನಾಡುತ್ತಿದ್ದೇನೆ ಎಂಬ ಬಗ್ಗೆ ಅರಿವು ಅವರಿಗೆ ಇರಬೇಕು ಎಂದು ಕಿಡಿಕಾರಿದ್ದಾರೆ.

ಅಲ್ಲದೇ, ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಕೇವಲ 2,500ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಟೀಕಿಸುವ ಸಿದ್ದರಾಮಯ್ಯನವರೇ ಈ ಹಿಂದೆ ಕೇವಲ 250 ಮತಗಳ ಅಂತರದಿಂದ ಗೆದ್ದಿದ್ದಾರಲ್ಲ ಅದು ಗೆಲುವಾ? ಅಥವಾ ಸೋಲಾ ಎಂದು ರೆಡ್ಡಿ ತಿರುಗೇಟು ನೀಡಿದ್ದಾರೆ.

ಹನುಮಂತಪ್ಪನನ್ನು ಹುಚ್ಚಾಸ್ಪತ್ರೆಗೆ ಸೇರಿಸ್ಬೇಕು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಹಣ, ಹೆಂಡ ಹಂಚಿದ್ದರು, ಚುನಾವಣೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಪದೇ,ಪದೇ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡ ಎನ್.ವೈ.ಹನುಮಂತಪ್ಪ ವಿರುದ್ಧವೂ ಕಿಡಿಕಾರಿರುವ ರೆಡ್ಡಿ, ಹನುಮಂತಪ್ಪಗೆ ಮತಿಭ್ರಮಣೆ ಆಗಿದ್ದು, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ