ಸಿದ್ದುವಿನದು ಸರ್ವಾಧಿಕಾರಿ ಧೋರಣೆ: ಯಡ್ಡಿ ಆರೋಪ

ಸೋಮವಾರ, 3 ಜೂನ್ 2013 (13:16 IST)
PR
PR
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಕೂಡಲೇ ಹಲವು ಯೋಜನೆಗಳನ್ನು ಅವುಗಳ ಸಾಧಕ-ಬಾಧಕಗಳ ಬಗ್ಗೆ ಯೋಚಿಸದೆ, ಸಂಪುಟದ ಸದಸ್ಯರೊಂದಿಗೂ ಸಮಾಲೋಚಿಸದೆ ಘೋಷಿಸುತ್ತಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಣಕಾಸಿನ ಸ್ಥಿತಿ ನೋಡಿಕೊಳ್ಳದೆ ಅವಸರ ಮತ್ತು ತರಾತುರಿಯಲ್ಲಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿದ್ದಾರೆ. ಇದರಿಂದಾಗಿ ಬೊಕ್ಕಸಕ್ಕೆ ಹೊರೆ ಬೀಳಲಿದೆ ಎಂದರಲ್ಲದೆ ಸಿದ್ದರಾಮಯ್ಯನವರ ಈ ಕ್ರಮಕ್ಕೆ ಅವರ ಸಂಪುಟದ ಬಹಳಷ್ಟು ಸದಸ್ಯರಿಗೇ ಅಸಮಾಧಾನವಿದೆ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ 1 ರೂ.ಗೆ ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿ 6 ಸಾವಿರ ಕೋಟಿ ಆರ್ಥಿಕ ಹೊರೆ ಬೀಳುವ ಕಾರ್ಯಕ್ರಮ ಘೋಷಣೆ ಮಾಡಿದರು. ಇಂತಹ ಜನಪ್ರಿಯ ಕಾರ್ಯಕ್ರಮಗಳನ್ನು ತಾವು ವಿರೋಧಿಸುವುದಿಲ್ಲ. ಆದರೆ, ಯೋಜನೆಯನ್ನು ಪದೇಪದೇ ಬದಲಾವಣೆ ಮಾಡುವುದು ಜನರಲ್ಲಿ ಗೊಂದಲ ಸೃಷ್ಟಿಸಿದೆ ಎಂದರು.

ಮುಖ್ಯಮಂತ್ರಿಗಳು ಒಂದು ಕಡೆ ಅಗ್ಗದ ಮದ್ಯ ಬಗ್ಗೆ ಮಾತನಾಡುತ್ತಾರೆ; ಮತ್ತೊಂದು ಕಡೆ ಜನರ ಆರೋಗ್ಯದ ದೃಷ್ಟಿಯಿಂದ ಗುಟ್ಕಾ ನಿಷೇಧಿಸಿದ್ದೇವೆ ಎನ್ನುತ್ತಾರೆ. ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು ಎನ್ನುವ ಸಿದ್ದರಾಮಯ್ಯ, ಇನ್ನೊಂದು ಕಡೆ ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿರುವುದರಿಂದಲೇ ಇಷ್ಟೆಲ್ಲ ಯೋಜನೆಗಳನ್ನು ಘೋಷಣೆ ಮಾಡಲಾಯಿತು ಎನ್ನುತ್ತಾರೆ. ಒಂದು ರೀತಿ ದ್ವಂದ್ವ ಮತ್ತು ತದ್ವಿರುದ್ಧ ಚಿಂತನೆ ಅವರಲ್ಲಿದೆ ಎಂದು ಯಡಿಯೂರಪ್ಪ ಟೀಕಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ, ಸಮಾನ ಮನಸ್ಕರೊಂದಿಗೆ ಕೆಜೆಪಿ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಹೇಳಿದ ಯಡಿಯೂರಪ್ಪ, ಆದರೆ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ