ಸೈಟ್‌ಗಾಗಿ ಗಂಡನನ್ನೇ ಸಾಯಿಸಿದ ಹೆಂಡತಿ? ಇದರಲ್ಲಿದೆ "ಕೈ"ವಾಡ

ಸೋಮವಾರ, 31 ಮಾರ್ಚ್ 2014 (15:35 IST)
"ನನ್ನ ಗಂಡ ಸತ್ತು ಹೋಗಿದ್ದಾನೆ. ನನಗೆ ಯಾರೂ ಇಲ್ಲ. ನಾನು ಅಬಲೆ. ನನ್ನ ಆದಾಯ 18 ಸಾವಿರಕ್ಕಿಂತಲೂ ಕಡಿಮೆ ಇದೆ. ದಯವಿಟ್ಟು ನನಗೆ ಒಂದು ಸರ್ಕಾರಿ ನಿವೇಶನವನ್ನು ನೀಡಿ" ಎಂದು ಸುಗಂಧಮ್ಮ ಎಂಬ ಮಹಿಳೆ ಬಿಡಿಎ ಸೈಟಿಗಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದಳು.

ಸರ್ಕಾರ ಕೂಡ ಹಿಂದೂ ಮುಂದು ನೋಡದೇ ಸುಗಂಧಮ್ಮನಿಗೆ ಬಿಡಿಎ ನಿವೇಶನವನ್ನು ಮಂಜೂರು ಮಾಡಿತು. ಆದರೆ ಇದೀಗ ಸತ್ಯ ಬಯಲಾಗಿದೆ. ಆಕೆಯ ಗಂಡ ಸತ್ತಿಲ್ಲ. ಗುಂಡು ಕಲ್ಲಿನಂತೆ ಬದುಕಿದ್ದಾರೆ. ಅದೂ ಸುಗಂಧಮ್ಮನ ಜೊತೆಯಲ್ಲೇ..!

ಗಂಡನ ಹೆಸರು ಕಡೂರು ಮಂಜಪ್ಪ. ಈತ ಕಾಂಗ್ರೆಸ್‌ ಪಕ್ಷದ ನಂಬಿಕಸ್ತ ಕಾರ್ಯಕರ್ತ. ಹೀಗಾಗಿ ಸರ್ಕಾರದ ಪ್ರಭಾವವನ್ನು ಮತ್ತು ಲೋಪದೋಷಗಳನ್ನು ಬಳಸಿಕೊಂಡು ಸ್ವಂತ ಹೆಂಡತಿಗೆ ಐಡಿಯಾ ಕೊಟ್ಟಿದ್ದಾನೆ..!

ಗಂಡ ಹೇಳಿಕೊಟ್ಟಂತೆ ಸುಗಂಧಮ್ಮ "ಗಂಡ ಸತ್ತಿದ್ದಾನೆ" ಅಂತ ಅರ್ಜಿ ಹಾಕಿ ಮನೆ ಗಿಟ್ಟಿಸಿಕೊಂಡಿದ್ದಾಳೆ. ಅಷ್ಟಕ್ಕೇ ಸುಮ್ಮನಿರದ ಭೂಪ ತನ್ನ ಇಬ್ಬರು ಮಕ್ಕಳಿಗೂ ಮತ್ತೆ ಐಡಿಯಾ ಕೊಟ್ಟು "ನನ್ನ ತಂದೆ ಸತ್ತಿದ್ದಾರೆ. ನನಗೆ ಯಾರೂ ದಿಕ್ಕಿಲ್ಲ" ಅಂತ ಹೇಳಿ ಅವರಿಗೂ ಬನಶಂಕರಿಯಲ್ಲಿ ಮನೆ ಸಿಗುವಂತೆ ಮಾಡಿದ್ದಾನೆ.

ಬಿಡಿಎ ಸೈಟ್‌ಗಾಗಿ ಇಷ್ಟಲ್ಲಾ ಕ್ರಿಮಿನಲ್‌ ಐಡಿಯಾ ಕೊಟ್ಟ ಕಡೂರು ಮಂಜಪ್ಪ ಸಾಮಾನ್ಯವಾದ ಮಿಕವಲ್ಲ. ರಾಜಾಜಿನಗರದಲ್ಲಿ ದೊಡ್ಡ ಬಂಗಲೆಗೆ ಸ್ವತಃ ತಾನೇ ಓನರ್‌ ಆಗಿದ್ದಾನೆ. "ದಿಕ್ಕು ದೆಸೆ ಇಲ್ಲ. ಅಪ್ಪ ಸತ್ತಿದ್ದಾನೆ" ಅಂತ ಮಗಳ ಮೂಲಕ ಅರ್ಜಿ ಸಲ್ಲಿಸಿ ಮಕ್ಕಳಿಗೂ ಮನೆ ಮಾಡಿ ಕೊಟ್ಟಿದ್ದಾನೆ. ಆದರೆ ಮೂರನೇ ಮಗಳು ಮಮತ ಭಾರತದಲ್ಲೇ ಇಲ್ಲ. ವಿದೇಶದಲ್ಲಿ ಹೋಗಿ ಆರಾಮಾಗಿ ಸೆಟ್ಲ್‌ ಆಗಿದ್ದಾಳೆ.

ಬಿಡಿಎ ಸೈಟಿಗಾಗಿ ಬದುಕಿರುವ ಗಂಡನನ್ನೇ ಹೆಂಡತಿ ಕಾಗದ ಪತ್ರದಲ್ಲಿ ಸಾಯಿಸಿ ತಹಶೀಲ್ದಾರರಿಗೆ ನೀಡಿದ್ದಾರೆ. ಗುಂಡು ಕಲ್ಲಿನಂತಿರುವ ತಂದೆಯನ್ನು ಪ್ರಮಾಣಪತ್ರದಲ್ಲಿ ಸಾಯಿಸಿದ ಮೂವರು ಮಕ್ಕಳಿಗೂ ಬನಶಂಕರಿಯಲ್ಲಿ ಜಬರ್‌ದಸ್ತ್‌ ಮನೆಗಳು ಸಿಕ್ಕಿವೆ.

ಇಷ್ಟೆಲ್ಲಾ ಆದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನದೇ ಸೈಲೆಂಟಾಗಿ ಕೂತುಬಿಟ್ಟಿದ್ದಾರೆ. ಯಾಕೆಂದ್ರೆ ಇದೀಗ ಅಧಿಕಾರದಲ್ಲಿರೋದು ಕಾಂಗ್ರೆಸ್‌ ಪಕ್ವೇ ತಾನೆ.. ಹೀಗಾಗಿ ಸರ್ಕಾರದ ಸಂಪೂರ್ಣ ಶ್ರೀರಕ್ಷೆ ಈ ಕಡೂರು ಮಂಜಪ್ಪನಿಗೆ ಇದೆ.

ವೆಬ್ದುನಿಯಾವನ್ನು ಓದಿ