ಸ್ಫೋಟ: ಮಣಿಪಾಲ ಲಾಡ್ಜ್‌ನಲ್ಲಿ ತಂಗಿದ್ದ ಉಗ್ರಗಾಮಿ!

ಮಂಗಳವಾರ, 23 ಸೆಪ್ಟಂಬರ್ 2008 (10:58 IST)
ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಬಂಧಿತನಾಗಿರುವ ಶಂಕಿತ ಉಗ್ರ ನಿಸಾರ್ ಆಗಸ್ಟ್ 29ರಂದು ಮಣಿಪಾಲದ ಲಾಡ್ಜ್ ಒಂದರಲ್ಲಿ ತಂಗಿದ್ದ ಎಂಬ ಸಂಗತಿ ತನಿಖೆಯಿಂದ ಬಹಿರಂಗಗೊಂಡಿದೆ.

ಈ ಸಂಬಂಧ ಶಂಕಿತ ಉಗ್ರನನ್ನು ಮಣಿಪಾಲ ಈಶ್ವರ ನಗರದ ಬ್ರಾಡ್ ವೇ ಲಾಡ್ಜ್‌ನ ಮಾಲೀಕ ಹಾಗೂ ಸಿಬ್ಬಂದಿ ಗುರುತಿಸಿದ್ದು, ಲಾಡ್ಜ್‌ನಲ್ಲಿ ತಂಗಿದ್ದ ಎಂದು ದೃಢಪಡಿಸಿದ್ದಾರೆ.

ಈತ ಲಾಡ್ಜ್‌ನಲ್ಲಿ ಶರ್ಮಾ ಹೆಸರಿನಲ್ಲಿ ತಂಗಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೆ, ಅದೇ ರಾತ್ರಿ ಲಾಡ್ಜ್‌ನ ಕೆಳಗಿರುವ ಸ್ಥಳೀಯ ಕರೆ ಸೌಲಭ್ಯವುಳ್ಳ ಕಾಯಿನ್ ಬಾಕ್ಸ್‌ನಿಂದ ಎಸ್‌ಟಿಡಿ ಕರೆ ಮಾಡಲು ಯತ್ನಿಸಿ ವಿಫಲನಾಗಿದ್ದೆ ಎಂದು ಆತ ತಿಳಿಸಿದ್ದಾನೆ.

ಹುಬ್ಬಳ್ಳಿ/ಧಾರವಾಡದಲ್ಲಿಯೂ ತನಿಖೆ:
ಈ ನಡುವೆ, ಕೇಂದ್ರ ಗುಪ್ತದಳ ಹಾಗೂ ರಾಜ್ಯ ಗುಪ್ತದಳದ ಜಂಟಿ ಪಡೆಯೊಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ದೆಹಲಿ ಹಾಗೂ ಅಹಮದಾಬಾದ್ ಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿದೆ.

ಇದೇ ವೇಳೆ ಅವಳಿ ನಗರದಲ್ಲಿ ಸಿಮಿ ಶಂಕಿತರ ಜಾಲ ಪತ್ತೆಯಾದ ಬಳಿಕ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ