ಹಂದಿಜ್ವರಕ್ಕೆ ಲಂಡನ್ ಲಸಿಕೆ ತರಿಸಲು ಚಿಂತನೆ

ಭಾನುವಾರ, 30 ಆಗಸ್ಟ್ 2009 (13:37 IST)
ರಾಜ್ಯದಲ್ಲಿ ಭೀತಿ ಮೂಡಿಸಿರುವ ಹಂದಿಜ್ವರಕ್ಕೆ ಲಂಡನ್ನಲ್ಲಿ ಲಭ್ಯ ಲಸಿಕೆ ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ, ರೋಗ ನಿಯಂತ್ರಣಕ್ಕೆ ಈಗಾಗಲೇ ವ್ಯಾಪಕ ಕ್ರಮ ಕೈಗೊಳ್ಳಲಾಗಿದ್ದು, ಲಂಡನ್ನಲ್ಲಿ ಲಭ್ಯವಿರುವ ಲಸಿಕೆಯನ್ನು ಆಮದು ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಂದಿಜ್ವರದ ಸೋಂಕು ತಗುಲಿದವರಿಗೆ ಚಿಕಿತ್ಸೆಗೆ ಸರ್ಕಾರ ತಲಾ 2 ಸಾವಿರ ರೂ. ನೀಡುತ್ತಿದೆ. ರೋಗಿಗಳಿಗೆ ಚಿಕಿತ್ಸೆ ಜತೆಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಕೇಳುವಂತಿಲ್ಲ. ಒಂದು ವೇಳೆ ಆ ಬಗ್ಗೆ ಯಾವುದೇ ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಮೈಸೂರು, ವಿಜಾಪುರ, ಬಳ್ಳಾರಿ, ಕೋಲಾರ ಮತ್ತು ದಾವಣೆಗೆರೆ ಜಿಲ್ಲೆಗಳಲ್ಲೂ ಹಂದಿಜ್ವರದ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿಯೇ 12 ಪ್ರಕರಣಗಳು ದೃಢಪಟ್ಟಿವೆ.

ವೆಬ್ದುನಿಯಾವನ್ನು ಓದಿ