ಹೃದಯಾಘಾತದಿಂದ ವಿ.ಎಸ್.ಆಚಾರ್ಯ ನಿಧನ: ರಾತ್ರಿ ಅಂತ್ಯಕ್ರಿಯೆ

ಮಂಗಳವಾರ, 14 ಫೆಬ್ರವರಿ 2012 (14:26 IST)
PR
ಬಿಜೆಪಿ ಹಿರಿಯ ಮುಖಂಡ, ಸಜ್ಜನ, ಅಜಾತಶತ್ರು ರಾಜಕಾರಣಿ ಎನಿಸಿಕೊಂಡ ವೇದವ್ಯಾಸ ಶ್ರೀನಿವಾಸ ಆಚಾರ್ಯ (ವಿ.ಎಸ್.ಆಚಾರ್ಯ) ಮಂಗಳವಾರ ಹಠಾತ್ ಹೃದಯಾಘಾತದಿಂದ ವಿಧಿವಶರಾಗಿರುವುದು ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಇಂದು ರಾತ್ರಿ ಉಡುಪಿಯಲ್ಲಿ ಆಚಾರ್ಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

1939ರಲ್ಲಿ ಕಟ್ಟೆ ಶ್ರೀನಿವಾಸ್-ಕೃಷ್ಣವೇಣಿ ಅಮ್ಮ ದಂಪತಿಗಳ ಪುತ್ರನಾಗಿ ಜನಿಸಿದ್ದ ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು 1959ರಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡಿದ್ದರು. 1968ರಲ್ಲಿ ಪ್ರಥಮ ಬಾರಿಗೆ ಉಡುಪಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು.

ತದನಂತರ 1974ರಲ್ಲಿ ಭಾರತೀಯ ಜನತಾ ಸಂಘದ ಜಿಲ್ಲಾಧ್ಯಕ್ಷರಾಗಿದ್ದರು. 1977ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹೀಗೆ ಹಂತ, ಹಂತವಾಗಿ ರಾಜಕೀಯವಾಗಿ ಮೇಲೇರಿದ್ದ ವಿ.ಎಸ್.ಆಚಾರ್ಯ ಬಿಜೆಪಿ ಸರ್ಕಾರದಲ್ಲಿ ಮುಜರಾಯಿ, ಗೃಹ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ವಿ.ಎಸ್.ಆಚಾರ್ಯ (71) ಪತ್ನಿ ಶಾಂತ.ವಿ.ಆಚಾರ್ಯ, ನಾಲ್ವರು ಗಂಡು ಮಕ್ಕಳು, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಇಂದು ರಾತ್ರಿ ಅಂತ್ಯಕ್ರಿಯೆ:
ರಾಜಧಾನಿಯ ರೇಸ್‌ಕೋರ್ಸ್ ನಿವಾಸದಲ್ಲಿ ಮಧ್ಯಾಹ್ನ 3.30ರವರೆಗೆ ವಿ.ಎಸ್.ಆಚಾರ್ಯ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಆಚಾರ್ಯ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಮಂಗಳೂರಿಗೆ ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಉಡುಪಿಗೆ ರವಾನಿಸಲಾಗುತ್ತದೆ. ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಜೆ 5ರಿಂದ 8ರವರೆಗೆ ಆಚಾರ್ಯ ಪಾರ್ಥಿವ ಶರೀರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾತ್ರಿ 10ಗಂಟೆಗೆ ಉಡುಪಿ ಬೀಡಿನ ಗುಡ್ಡೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಉಡುಪಿ ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ರಾಜ್ಯಾದ್ಯಂತ ಎರಡು ದಿನಗಳ ಕಾಲ ಶೋಕಾಚರಣೆ ಆಚರಿಸಲು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ