ಹೊಸ ಪಟ್ಟಿಯೊಂದಿಗೆ ಆಖಾಡ ಪ್ರವೇಶಿಸಿದ ಎಸ್.ಎಂ. ಕೃಷ್ಣ

ಶನಿವಾರ, 30 ಮಾರ್ಚ್ 2013 (09:58 IST)
PTI
PTI
ಆಗಸ್ಟ್‌ನಲ್ಲಿ ವಿದೇಶಾಂಗ ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ ಸಕ್ರಿಯ ರಾಜಕಾರಣದಿಂದ ದೂರವುಳಿದಿದ್ದ ಕಾಂಗ್ರೆಸ್ ಮುಖಂಡ ಎಸ್.ಎಂ. ಕೃಷ್ಣ, ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲವೆಂದು ಪಕ್ಷದ ಹೈಕಮಾಂಡ್‌ಗೆ ಸ್ಪಷ್ಟಪಡಿಸಿದ್ದಾರಲ್ಲದೆ ಒಕ್ಕಲಿಗರ ಪ್ರಾಬಲ್ಯವಿರುವ 54 ಕ್ಷೇತ್ರಗಳನ್ನು ಈ ಸಮಾಜದ ಅಭ್ಯರ್ಥಿಗಳಿಗೆ ಬಿಟ್ಟುಕೊಡುವಂತೆ ಒತ್ತಡ ಹೇರಿದ್ದಾರೆ.

ಒಕ್ಕಲಿಗರು 54 ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆನ್ನುವ ಪಟ್ಟಿಯೊಂದನ್ನು ಶುಕ್ರವಾರ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ), ಗುರುವಾರ ರಾಜ್ಯದ 102 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಈ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ.

ಬೆಂಗಳೂರಿನಿಂದ ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕೃಷ್ಣ ಸಂಜೆ ಸೋನಿಯಾ ಅವರನ್ನು ಭೇಟಿ ಮಾಡಿದರು. ಒಂದು ಗಂಟೆ ನಡೆದ ಮಾತುಕತೆ ಸಮಯದಲ್ಲಿ 54 ಒಕ್ಕಲಿಗ ಅಭ್ಯರ್ಥಿಗಳ ಹೆಸರಿರುವ ಪಟ್ಟಿ ನೀಡಿದರು. ಅನಂತರ ಸೋನಿಯಾ ಅವರ ಸೂಚನೆಯಂತೆ ಚುನಾವಣಾ ಸಮನ್ವಯ ಸಮಿತಿ ಅಧ್ಯಕ್ಷ ಆಂಟನಿ ಅವರ ಜತೆ ಸಮಾಲೋಚಿಸಿದರು.

54 ಕ್ಷೇತ್ರಗಳಿಗೆ ತಾವು ಶಿಫಾರಸು ಮಾಡುತ್ತಿರುವ ಅಭ್ಯರ್ಥಿಗಳಿಗೇ ಏಕೆ ಟಿಕೆಟ್ ನೀಡಬೇಕೆಂದು ಕೃಷ್ಣ ಸೋನಿಯಾ ಬಳಿ ಪ್ರತಿಪಾದಿಸಿದರು. ಕೆಲವು ದಿನಗಳ ಹಿಂದೆ ಕೃಷ್ಣ ಇಂತಹುದೇ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೂ ನೀಡಿದ್ದರು. ತಾವು ಹೇಳಿದವರಿಗೆ ಟಿಕೆಟ್ ಕೊಡದಿದ್ದರೆ ಪ್ರಚಾರಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ