ಹೊಸ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಆಯ್ಕೆ ಸಾಧ್ಯತೆ

ಗುರುವಾರ, 28 ಜುಲೈ 2011 (11:33 IST)
WD
ಕೇಂದ್ರ ಸರಕಾರದ ಭ್ರಷ್ಟಾಚಾರದ ವಿರುದ್ಧ ಪ್ರಬಲವಾಗಿ ಹೋರಾಟ ನಡೆಸುವ ಉದ್ದೇಶದೊಂದಿಗೆ ಅಕ್ರಮ ಗಣಿಗಾರಿಕೆಯಲ್ಲಿ ಲಾಭ ಪಡೆದಿದ್ದಾರೆಂಬ ಆರೋಪದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಕೇಳಿರುವ ಬಿಜೆಪಿ ಹೈಕಮಾಂಡ್, ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುರಿತು ತೀವ್ರ ಸಮಾಲೋಚನೆ ನಡೆಸಲು ಆರಂಭಿಸಿದ್ದು, ಪಕ್ಷದ ಮುಖಂಡರಾದ ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ತೀರಾ ಇತ್ತೀಚಿನ ವರದಿಗಳ ಪ್ರಕಾರ, ಬಿಜೆಪಿಯ ಉಡುಪಿ ಸಂಸದ, ಮಾಜಿ ರಾಜ್ಯಾಧ್ಯಕ್ಷ, ಒಕ್ಕಲಿಗ ಸಮುದಾಯದ ಮುಖಂಡ ಡಿ.ವಿ.ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಲು ಹೈಕಮಾಂಡ್ ಒಲವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಆದರೂ, ಹೊಸ ನಾಯಕನ ಆಯ್ಕೆಗೆ ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ನಾಳೆ ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಇದರಲ್ಲಿ ಕೇಂದ್ರದ ವೀಕ್ಷಕರು ಭಾಗವಹಿಸಲಿದ್ದಾರೆ.

ಮುಂದಿನ ಮುಖ್ಯಮಂತ್ರಿ ಯಾರು ಎಂಬ ಊಹಾಪೋಹಗಳ ಪಟ್ಟಿಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರಲ್ಲದೆ, ಕಾನೂನು ಸಚಿವ ಸುರೇಶ್ ಕುಮಾರ್, ಸಚಿವ ವಿ.ಎಸ್.ಆಚಾರ್ಯ, ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರುಗಳ ಹೆಸರುಗಳು ಕೇಳಿ ಬರುತ್ತಿವೆ. ಇದರೊಂದಿಗೆ ಸಂಸತ್ ಸದಸ್ಯರಾಗಿರುವ ಮತ್ತು ಯಡಿಯೂರಪ್ಪ ವಿರೋಧಿ ಬಣದಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಅನಂತ್ ಕುಮಾರ್ ಅವರ ಹೆಸರೂ ಕೇಳಿಬರುತ್ತಿದೆ.

ಹಾಗಿದ್ದರೆ ವೆಬ್‌ದುನಿಯಾ ಓದುಗರಾದ ನಿಮ್ಮ ಆಯ್ಕೆ ಯಾರು? ಅಥವಾ ವಿಧಾನಸಭೆ ವಿಸರ್ಜಿಸಿ ಜನತಾ ನ್ಯಾಯಾಲಯಕ್ಕೆ ಹೋಗುವುದೇ ಸೂಕ್ತವೇ? ನಿಮ್ಮ ಅನಿಸಿಕೆಯೇನು? ಅಶ್ಲೀಲ, ಅಸಭ್ಯ ಪದ ಬಳಸದೆ ಚರ್ಚೆ ಮಾಡಿ.

ವೆಬ್ದುನಿಯಾವನ್ನು ಓದಿ