ಹೊಸ ರೂಪು ತಾಳಿದ ಉಡುಪಿ ಶ್ರೀಕೃಷ್ಣ ಪರ್ಯಾಯ ವಿವಾದ

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ವಿವಾದ ದಿನಕ್ಕೊಂದು ರೂಪ ತಾಳುತ್ತಿದೆ.

ಪರ್ಯಾಯ ಪೀಠಾರೋಹಣ ಮಾಡಿದರೂ ವಿದೇಶಯಾನ ಮಾಡಿರುವ ಪುತ್ತಿಗೆ ಶ್ರೀಗಳು ಶ್ರೀಕೃಷ್ಣ ಪೂಜೆ ನೆರವೇರಿಸುವಹಾಗಿಲ್ಲ ಎಂಬ ತಮ್ಮ ಷರತ್ತಿಗೆ ಒಪ್ಪಿದ್ದಾರೆ ಎಂದು ಪೇಜಾವರ ಶ್ರಿ ವಿಶ್ವೇಶತೀರ್ಥ ಸ್ವಾಮಿಜಿ ಅವರು ಹೇಳಿದ್ದರೆ, ಹಾಗೆ ತಾವು ಒಪ್ಪಿಲ್ಲ ಎಂದು ಪುತ್ತಿಗೆ ಶ್ರೀಗಳು ಹೇಳುವುದರೊಂದಿಗೆ ಈ ವಿವಾದ ತಾರಕ್ಕೇರಿದೆ.

ತಮ್ಮ ವಿದೇಶಯಾನವನ್ನು ಸಮರ್ಥಿಸಿಕೊಂಡ ಪುತ್ತಿಗೆ ಶ್ರಿಗಳು ಪರ್ಯಾಯ ಪೀಠಾರೋಹಣ ಮತ್ತು ಕೃಷ್ಣ ಪೂಜೆಗಳನ್ನು ತಾವೇ ಮಾಡುವುದಾಗಿ ಹೇಳಿದ್ದರು. ಆದರೆ ಪೇಜಾವರ ಶ್ರೀಗಳು ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ.

ಪ್ರಜಾಪ್ರಭುತ್ವ ಮಾದರಿಯಲ್ಲಿ ಬಹುಮತದಂತೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ಪೇಜಾವರ ಶ್ರೀಗಳು ಹೇಳುವುದರೊಂದಿಗೆ ಪರ್ಯಾಯ ಪೀಠಾರೋಹಣಗೆ ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವ ರೀತಿಯ ರೂಪು ಬಂದಿದೆ.

ಪುತ್ತಿಗೆ ಶ್ರೀಗಳು ಶಿಷ್ಯರೊಬ್ಬರನ್ನು ಸ್ವೀಕರಿಸಿ, ಅವರಿಂದ ಪೀಠಾರೋಹಣ ಮಾಡಿಸಿ, ಕೃಷ್ಣ ಪೂಜೆ ನಡೆಸಬೇಕು ಎಂಬ ಪ್ರಸ್ತಾವನೆಯನ್ನು ಇತರ ಮಠಗಳ ಶ್ರೀಗಳ ಮುಂದೆ ಇಟ್ಟಿದ್ದಾರೆ.

ಅಥವಾ ಉಳಿದ ಮಠಗಳ ಪೈಕಿ ಯಾವುದಾದರೂ ಒಂದು ಮಠದ ಶ್ರೀಗಳು ಪರ್ಯಾಯ ಪೀಠಾರೋಣ ಮಾಡಿ ಕೃಷ್ಣ ಪೂಜೆ ನೆರವೇರಿಸುವುದು ಮತ್ತೊಂದು ಪ್ರಸ್ತಾವನೆ.

ಇದಕ್ಕೆ ಪುತ್ತಿಗೆ ಶ್ರೀಗಳು ಈ ಎರಡು ಪ್ರಸ್ತಾವನೆಗಳಲ್ಲಿ ಯಾವುದನ್ನು ಒಪ್ಪಲೂ ಸಿದ್ಧರಿಲ್ಲ.

ತಮಗೆ ಎಲ್ಲ ಅರ್ಹತೆ ಇರುವಾಗ ಬೇರೊಬ್ಬರಿಗೆ ಈ ಅವಕಾಶ ಏಕೆ ನೀಡಬೇಕು ಎಂಬುದು ಅವರ ಪ್ರಶ್ನೆ. ಯಾರನ್ನೋ ಶಿಷ್ಯರಾಗಿ ಸ್ವೀಕರಿಸಿ ತಾವು ಉತ್ಸವ ಮೂರ್ತಿಯಂತೆ ಕೂರುವುದು ತಮ್ಮಿಂದ ಸಾಧ್ಯವಿಲ್ಲ ಎಂದು ಪುತ್ತಿಗೆ ಶ್ರೀಗಳು ಹೇಳಿದ್ದಾರೆ.

ಈ ನಡುವೆ ಬದಲಿ ವ್ಯವಸ್ಥೆ ಮಾಡಿ ಎಂದು ಆಗ್ರಹಿಸುವ ಪತ್ರದಲ್ಲಿ ತಾವು ಸಹಿ ಹಾಕಿರುವುದಾಗಿ ಹೇಳಲಾಗುತ್ತಿದ್ದರೂ ಅದು ತಮ್ಮ ಸಹಿ ಅಲ್ಲ ಎಂದು ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ