ಒಂದು ಕೋಟಿ ಲಂಚ ಪ್ರಕರಣ: ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

ಮಂಗಳವಾರ, 30 ಜೂನ್ 2015 (17:29 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐಗೊಪ್ಪಿಸಿ ತನಿಖೆ ನಡೆಸಬೇಕೆಂದು ಕೋರಿ ರಾಜ್ಯದ ಹೈಕೋರ್ಟ್ ಮೆಟ್ಟಿಲೇರಿರುವ ಇಬ್ಬರು ವ್ಯಕ್ತಿಗಳು ಪಿಐಎಲ್ ಸಲ್ಲಿಸಿದ್ದಾರೆ. 
 
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳನ್ನು ಭಾಸ್ಕರನ್ ಹಾಗೂ ನಾರಾಯಣ ಶೆಟ್ಟಿ ಎಂದು ಹೇಳಲಾಗಿದ್ದು, ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಂಸ್ಥೆ ಲೋಕಾಯುಕ್ತ ಇಲಾಖೆ. ಆದರೆ ಅದೇ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಪ್ರಕಱಣವನ್ನು ಲೋಕಾಯುಕ್ತ ಇಲಾಖೆಯ್ಲಲಿನ ಅಧಿಕಾರಿಗಳೇ ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸ್ವತಂತ್ರ ಸಂಸ್ಥೆಯಾದ ಸಿಬಿಐಗೆ ವಹಿಸಬೇಕೆಂದು ತಮ್ಮ ಪಿಐಎಲ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. 
 
ಪ್ರಕರಣದ ಹಿನ್ನೆಲೆ: ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಬೆಂಗಳೂರು ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಅವರ ತನಿಖೆಗೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರು ತಡೆ ನೀಡಿ ಪ್ರಕರಣವನ್ನು ತಮ್ಮ ಸ್ವಂತ ಅಧಿಕಾರ ಬಳಸಿ ಸಿಸಿಬಿಗೆ ವಹಿಸಿದ್ದರು. 
 
ಈ ಸಂಬಂಧ ಪ್ರತಿಕ್ರಿಯಿಸಿದ್ದ ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಸಿಸಿಬಿಗೆ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿರುವಾಗಿ ಮುಖ್ಯ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ ಎಂದು ಆರೋಪಿಸಿದ್ದರು. ಇದು ಲೋಕಾಯುಕ್ತ ಇಲಾಖೆ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ವಿಶೇಷ ತನಿಖಾ ತಂಡ ರಚಿಸಿ ಪ್ರಕರಣವನ್ನು ವರ್ಗಾಯಿಸಿದೆ.  
 
ಇನ್ನು ಪ್ರಕರಣದಲ್ಲಿ ಲೋಕಾಯುಕ್ತ ಇಲಾಖೆಯ ಜಂಟಿ ಆಯುಕ್ತ ರಿಯಾಜ್, ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಹಾಗೂ ಅವರ ಸಂಬಂಧಿ ಆಂಧ್ರ ಮೂಲದ ಕೃಷ್ಣ ರಾವ್ ಅಲಿಯಾಸ್ ನರಸಿಂಹ ರಾವ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. 

ವೆಬ್ದುನಿಯಾವನ್ನು ಓದಿ