1 ಕೋಟಿ ರೂ. ಡೀಲ್: ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಿದ ಸರ್ಕಾರ

ಮಂಗಳವಾರ, 30 ಜೂನ್ 2015 (12:29 IST)
ಒಂದು ಕೋಟಿ ರೂ. ಡೀಲ್ ಪ್ರಕರಣದ ತನಿಖೆ ನಡೆಸುವ ಸಲುವಾಗಿ ರಾಜ್ಯ ಸರ್ಕಾರವು ಇಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ತನಿಖೆ ನಡೆಸುವಂತೆ ಆದೇಶಿಸಿದೆ. 
 
ನೂತನವಾಗಿ ರಚಿಸಲಾಗಿರುವ ಈ ಎಸ್ಐಟಿ ತನಿಖಾ ತಂಡಕ್ಕೆ ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ಕಾರಾಗೃಹ ಇಲಾಖೆಯ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಮಲ್ ಪಂತ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ. 
 
ಮೂಲಗಳ ಪ್ರಕಾರ, ಈಗಾಗಲೇ ಎಲ್ಲಾ ರೀತಿಯ ಕ್ರಮಕ್ಕೆ ತನಿಖಾ ತಂಡ ಮುಂದಾಗಿದ್ದು, ಪ್ರಥಮ ಹಂತದಲ್ಲಿ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎನ್ನಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ಈ ಪ್ರಕರಣದಿಂದ ರಾಜ್ಯ ಸರ್ಕಾರ ಮುಜುಗರಕ್ಕೀಡಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. 
 
ಪ್ರಕರಣದ ಹಿನ್ನೆಲೆ: ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಬೆಂಗಳೂರು ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಅವರ ತನಿಖೆಗೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರು ತಡೆ ನೀಡಿ ಪ್ರಕರಣವನ್ನು ತಮ್ಮ ಸ್ವಂತ ಅಧಿಕಾರ ಬಳಸಿ ಸಿಸಿಬಿಗೆ ವಹಿಸಿದ್ದರು. 
 
ಈ ಸಂಬಂಧ ಪ್ರತಿಕ್ರಿಯಿಸಿದ್ದ ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಸಿಸಿಬಿಗೆ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿರುವಾಗಿ ಮುಖ್ಯ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ ಎಂದು ಆರೋಪಿಸಿದ್ದರು. ಇದು ಲೋಕಾಯುಕ್ತ ಇಲಾಖೆ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ವಿಶೇಷ ತನಿಖಾ ತಂಡ ರಚಿಸಿ ಪ್ರಕರಣವನ್ನು ವರ್ಗಾಯಿಸಿದೆ.  
 
ಇನ್ನು ಪ್ರಕರಣದಲ್ಲಿ ಲೋಕಾಯುಕ್ತ ಇಲಾಖೆಯ ಜಂಟಿ ಆಯುಕ್ತ ರಿಯಾಜ್, ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಹಾಗೂ ಅವರ ಸಂಬಂಧಿ ಆಂಧ್ರ ಮೂಲದ ಕೃಷ್ಣ ರಾವ್ ಅಲಿಯಾಸ್ ನರಸಿಂಹ ರಾವ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. 

ವೆಬ್ದುನಿಯಾವನ್ನು ಓದಿ