ಗ್ರಾಮ್ ಪಂಚಾಯತ್ ಉಪಾಧ್ಯಕ್ಷೆಯಾದ ಶತಾಯುಷಿ ಗೌತಮ್ಮ

ಭಾನುವಾರ, 5 ಜುಲೈ 2015 (11:39 IST)
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಣಕ್ಕಿಳಿದು ಭರ್ಜರಿ ಜಯಗಳಿಸಿ ರಾಜ್ಯಾದ್ಯಂತ ಗಮನ ಸೆಳೆದಿದ್ದ ಗೌತಮ್ಮಮ್ಮ ದೊಡ್ಡಾಲತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. 
 
ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನೀಲಮ್ಮ ಎಂಬ ಮಹಿಳೆ ಆಯ್ಕೆಯಾದರೆ, ಗೌತಮ್ಮಮ್ಮ( ಗವಿತಿಮ್ಮಮ್ಮ) ಅವಿರೋಧವಾಗಿ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದರು. ಹೊಸದಾಗಿ ರಚನೆಯಾಗಿರುವ ಈ ಪಂಚಾಯತ್‌ನಲ್ಲಿ 8 ಸದಸ್ಯರ ಬಲವಿದೆ. 
 
ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ದೊಡ್ಡಾಲತ್ತೂರು ಗ್ರಾಮದ ಗವಿತಿಮ್ಮಮ್ಮ ಕಡು ಬಡತನ, 100ವರ್ಷ ದಾಟಿದ ವೃದ್ಧಾಪ್ಯದಲ್ಲಿ ಸಹ ಸ್ವಾವಲಂಬಿ ಜೀವನ ಸಾಗಿಸುತ್ತ ಜನಮೆಚ್ಚುಗೆ ಗಳಿಸಿದವರು. 
 
ಈ ಇಳಿ ವಯಸ್ಸಿನಲ್ಲೂ ಯಾರದೇ ಆಶ್ರಯವಿಲ್ಲದೇ ತನ್ನ ಜೀವನಕ್ಕೆ ಬೇಕಾಗುವ ನೀರು, ದವಸ-ಧಾನ್ಯ, ಕಟ್ಟಿಗೆ ಹೀಗೆ ಎಲ್ಲ ವಸ್ತುಗಳನ್ನು ತಾನೇ ತಂದುಕೊಂಡು ಜೀವನ ಸಾಗಿಸುವ ಗೌತಮಮ್ಮ ಜನ ಪ್ರತಿನಿಧಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.
 
ಸದಾ ಒಂಟಿ ಜೀವನ ಸಾಗಿಸುತ್ತಿದ್ದ ಗೌತಮಮ್ಮರವರ ಮನೆಗೆ ಈಗ ಗ್ರಾಮದ ಎಲ್ಲರೂ ಬರತೊಡಗಿದ್ದಾರೆ. ಗ್ರಾಮ ಪಂಚಾಯತ್‌ಗೆ ಚುನಾಯಿತರಾದವರು ಗ್ರಾಮದ ಅಭಿವೃದ್ಧಿ ಕಡೆ ನಿರ್ಲಕ್ಷ ತೋರಿಸುತ್ತಿದ್ದಾರೆ ಎಂಬ ಬೇಸರದಿಂದ ತಾನು ಚುನಾವಣೆಗೆ ಸ್ಪರ್ಧಿಸಿ ಗ್ರಾಮಾಭಿವೃದ್ಧಿ ಮಾಡುವ ಗುರಿಯೊಂದಿಗೆ ಅಜ್ಜಿ ಕಣಕ್ಕಿಳಿದಿದ್ದರು. 
 
ಶತಾಯುಷಿಯಾಗಿದ್ದರೂ ತಾನೇನು ಇತರಿಗೆ ಕಡಿಮೆಯಿಲ್ಲ ಎಂದು ಸವಾಲೆಸುವಂತೆ  ಅಜ್ಜಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ರಾಜ್ಯದ ಗಮನವನ್ನು ಸೆಳೆದಿತ್ತು. ಗ್ರಾಮಸ್ಥರೆಲ್ಲ ಒಗ್ಗೂಡಿ ಅಜ್ಜಿಗೆ ಮತ ಚಲಾಯಿಸಲು ನಿರ್ಧರಿಸಿ ಒಮ್ಮತದಿಂದ ಅವರನ್ನು ಗೆಲ್ಲಿಸಿದ್ದರು. 
 
ಮೊದಲನೇ ಚುನಾವಣೆಯಲ್ಲಿಯೇ 354 ಮತಗಳನ್ನು ಗಳಿಸಿದ ಗೌತಮ್ಮ ಅವರು 160 ಮತಗಳನ್ನು ಗಳಿಸಿದ ತಮ್ಮ ಸಮೀಪದ ಸ್ಪರ್ಧಿ ನೀಲಮ್ಮ ಅವರನ್ನು ಸೋಲಿಸಿದ್ದರು. ಗೌತಮ್ಮ ಅವರ ಮೈದುನ ಕೂಡ ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದರು.

ವೆಬ್ದುನಿಯಾವನ್ನು ಓದಿ