ಇಸ್ಕಾನ್ ಊಟ ಸೇವಿಸಿ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಶುಕ್ರವಾರ, 19 ಸೆಪ್ಟಂಬರ್ 2014 (16:14 IST)
ಡಿ.ಜೆ. ಹಳ್ಳಿಯ ಮೋದಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಇಸ್ಕಾನ್ ಊಟ ಸೇವಿಸಿ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಊಟದಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗಿದ್ದು 150 ಕ್ಕೂ ಹೆಚ್ಚು ಮಕ್ಕಳು  ವಿಷಯುಕ್ತ ಆಹಾರ ಸೇವನೆಯಿಂದ ಅಸ್ವಸ್ಥರಾಗಿ ವಾಂತಿ, ಭೇದಿಗೆ ಒಳಗಾದರು.

ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಅಂಬೇಡ್ಕರ್ ಆಸ್ಪತ್ರೆಗೆ ಸೇರಿಸಲಾಗಿದೆ. ಮಕ್ಕಳು ಅಸ್ವಸ್ಥರಾಗಿದ್ದರಿಂದ ಪೋಷಕರು ತೀವ್ರ ಆತಂಕಗೊಂಡು ಆಸ್ಪತ್ರೆಯ ಹೊರಗೆ ಜಮಾಯಿಸಿದ್ದರು. ಆಹಾರ ವಿಷಯುಕ್ತವಾಗಿರುವ ಹೇಗೆಂಬ ಬಗ್ಗೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

ಆಸ್ಪತ್ರೆಯ ಎದುರು ಜಮಾಯಿಸಿದ್ದ ಪೋಷಕರು ಮಕ್ಕಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿದರು.  150ಕ್ಕೂ ಹೆಚ್ಚು ಮಕ್ಕಳು ಏಕಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ಏನು ಮಾಡಬೇಕೆಂದು ತೋಚದಿದ್ದರಿಂದ ಪೋಷಕರ ಆಕ್ರೋಶಕ್ಕೆ ಗುರಿಯಾದರು.

ವೆಬ್ದುನಿಯಾವನ್ನು ಓದಿ