ಸಿಎಂ ಸಹಿಯಿಂದ ಸರ್ಕಾರಕ್ಕೆ 16 ಸಾವಿರ ಕೋಟಿ ನಷ್ಟ: ಶೆಟ್ಟರ್ ಆರೋಪ

ಶನಿವಾರ, 24 ಜನವರಿ 2015 (18:18 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಒಂದೂವರೆ ವರ್ಷದ ಅಧಿಕಾರಾವಧಿಯಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸಿ ಒಟ್ಟು 707 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಒಟ್ಟು 16 ಸಾವಿರ ಕೋಟಿ ನಷ್ಟವಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. 
 
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಾನು ಡಿನೋಟಿಫಿಕೇಶನ್ ಮಾಡಿಲ್ಲ. ಆದರೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ರೀಡೂ ನಿಯಮದಡಿಯಲ್ಲಿ ಡಿನೋಟಿಫಿಕೇಶನ್ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ನ್ಯಾಯಾಲಯವು 2003ರಲ್ಲಿ ಭೂ ಸ್ವಾಧೀನ ಕಾಯಿದೆಗೆ ಸಂಬಂಧಿಸಿದಂತೆ ನಿರ್ದೇಶಿಸಿದೆಯಾದರೂ ನ್ಯಾಯಾಲಯದ ಯಾವುದೇ ನಿರ್ದೇಶನದಲ್ಲಿ ಅಥವಾ ಭೂ ಸ್ವಾಧೀನ ಕಾಯಿದೆ-2003ರ 48/1 ರ ನಿಯಮಗಳಲ್ಲಿ ಎಲ್ಲಿಯೂ ಕೂಡ ರೀಡೂ ಅಥವಾ ರೀ ಮೋಡಿಫಿಕೇಶನ್ ಎಂಬ ಪದವನ್ನು ನ್ಯಾಯಾಲಯ ಹೇಳಿಲ್ಲ. 
 
ಅಲ್ಲದೆ ಬಿಡಿಎ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಸಂಬಂಧಿಸಿದ ಕಡತಗಳನ್ನು ಸಿಎಂ ಅನುಮೋದನೆಗೆಂದು ಸಲ್ಲಿಸುತ್ತಾರೆ. ಆದರೆ ಸಿಎಂ ಆದವರು ಸಹಿಗೂ ಮುನ್ನ ಇತರೆ ಅಧಿಕಾರಿಗಳಿಂದ, ವಕೀಲರಿಂದ ಸಲಹೆ ಸೂಚನೆ ಪಡೆದು, ನ್ಯಾಯಾಲಯದ ನಿರ್ದೇಶನಗಳಿಗೆ ತಕ್ಕಂತೆ ಡಿನೋಟಿಫಿಕೇಶನ್ ಮಾಡಬೇಕಾಗುತ್ತದೆ. ಆದರೆ ಸಿಎಂ ಸಿದ್ದರಾಮಯ್ಯನವರು ಯಾವುದೇ ಚರ್ಚೆ, ಸೂಚನೆ ಹಾಗೂ ಸಲಹೆಗಳಿಲ್ಲದೆ ಡಿನೋಟಿಫಿಕೇಶನ್ ಮಾಡಿದ್ದಾರೆ. ಅಕ್ರಮ ಎಂದು ಕಂಡು ಬಂದಿದ್ದಲ್ಲಿ ಸಹಿ ಹಾಕಬಾರದಿತ್ತು. ಆದರೆ ಯಾಕೆ ಸಹಿ ಹಾಕಿದರು ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು. 
 
ಬಳಿಕ ಅವರು ಮಾಡಿರುವ 422 ಎಕರೆಯ ಒಂದೇ ಕಡತದಲ್ಲಿ ಸುಮಾರು 119 ಎಕರೆ ಭೂಮಿಗೆ ಸಂಬಂಧ ಡಿನೋಟಿಫಿಕೇಶನ್ ಅಕ್ರಮವಾಗಿದ್ದು, ಸರ್ಕಾರ ಹಾಗೂ ಬಿಡಿಎಗೆ ಸುಮಾರು 16 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಆರೋಪಿಸಿದರು. 
 
ಡಿನೋಟಿಫಿಕೇಶನ್ ಬಗ್ಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ನಾನು ಸ್ವತಃ ಒಂದು ಇಂಚು ಭೂಮಿಯನ್ನೂ ಕೂಡ ಡಿನೋಟಿಫಿಕೇಶನ್ ಮಾಡಿಲ್ಲ. ಆದರೆ ನ್ಯಾಯಾಲಯದ ರೀಡೂ ನಿರ್ದೇಶನವನ್ನು ಬಳಸಿ ಸಹಿ ಹಾಕಿದ್ದೇನೆ ಅಷ್ಟೇ ಎಂದು ತಿಳಿಸಿದ್ದರು.   

ವೆಬ್ದುನಿಯಾವನ್ನು ಓದಿ