ಗ್ರಾ. ಪಂಚಾಯತ್‌ನಲ್ಲಿ 16 ಲಕ್ಷ ಗೋಲ್‌ಮಾಲ್: ಎಫ್ಐಆರ್ ದಾಖಲು

ಸೋಮವಾರ, 25 ಮೇ 2015 (17:58 IST)
ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮ ಪಂಚಾಯತ್‌ನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಪಂಚಾಯತ್‌ನ ಅಧ್ಯಕ್ಷರು ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.  
 
 ನರೇಗಾ ಯೋಜನೆ ಅಡಿಯಲ್ಲಿ ಸಾಮಾನ್ಯರಿಂದ ಕೆಲಸ ಮಾಡಿಸಿ ಸಾಮಾನ್ಯನ ಜೀವನಕ್ಕೆ ನೆರವಾಗಬೇಕಾದ ಇಲ್ಲಿನ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಜೆಸಿಬಿ ಬಳಸಿ ಕೆಲಸ ಸಂಪೂರ್ಣಗೊಳಿಸುತ್ತಿದ್ದು, ಬಂದ ಎಲ್ಲಾ ಅನುದಾನದ ಹಣವನ್ನು ಸಾರ್ವಜನಿಕರಿಗೆ ತಲುಪಿಸದೆ ಅವರೇ ನುಂಗಿದ್ದಾರೆ ಎಂಬುದು ಗ್ರಾಮಸ್ಥರ ಗಂಭೀರ ಆರೋಪ. 
 
ಇನ್ನು ಗ್ರಾಮಸ್ಥರ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್‌ನ ಉನ್ನತ ಅಧಿಕಾರಿಗಳು ಪಂಚಾಯತ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ನಕಲಿ ಬಿಲ್ ತಯಾರಿಸುವ ಹಾಗೂ ನರೇಗಾಗೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಣೆ ಮಾಡುತ್ತಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಅಲ್ಲದೆ 16 ಲಕ್ಷ ರೂ. ಅಕ್ರಮ ನಡೆದಿರುವುದು ಕಂಡುಬಂದಿತ್ತು. ಅಲ್ಲದೆ ಅಧಿಕಾರಿಗಳು ಸರ್ಕಾರಕ್ಕೆ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ಶಿಫಾರಸು ಮಾಡಿದ್ದರು. 
 
ಈ ಹಿನ್ನೆಲೆಯಲ್ಲಿ ಪಂಚಾಯತ್‌ನ ಮಾಜಿ ಅಧ್ಯಕ್ಷ ಗಂಗಾಧರ್, ಪಿಡಿಒ ಚನ್ನೇಗೌಡ ಹಾಗೂ ಹಲಗೂರು ವಿಭಾಗದ ಕಿರಿಯ ಎಂಜಿನಿಯರ್ ಬೋರೇಗೌಡ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 
 
ಇನ್ನು ಆರೋಪಿ ಗಂಗಾಧರ್ ಅವರು ಮಳವಳ್ಳಿ ಕ್ಷೇತ್ರದ ಪಿ.ಎಂ.ನರೇಂದ್ರಸ್ವಾಮಿ ಅವರ ಬಲಗೈ ಬಂಟ ಎನ್ನಲಾಗುತ್ತಿದ್ದು, ಆತನನ್ನು ಪ್ರಕರಣದಲ್ಲಿ ರಕ್ಷಿಸುತ್ತಿದ್ದಾರೆ ಎಂಬ ಗುಸು ಗುಸು ಸುದ್ದಿ ಕೂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹರಿದಾಡುತ್ತಿದೆ. 
 
ಪ್ರಕರಣ ಸಂಬಂಧ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ್ ಪ್ರತಿಕ್ರಿಯಿಸಿದ್ದು, ನಾನು ಸರ್ಕಾರಕ್ಕೆ ನರೇಗಾ ಯೋಜನೆಗೆ ಸಂಬಂಧಿಸಿದ ಬಿಲ್‌ಗಳನ್ನು ನೀಡಿಲ್ಲ ಎಂಬ ಕಾರಣದಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ. 
 

ವೆಬ್ದುನಿಯಾವನ್ನು ಓದಿ