2ನೇ ಹಂತ: ಶುಕ್ರವಾರ ಅಭ್ಯರ್ಥಿಗಳ ಹಣೆಬರಹ ನಿರ್ಧಾರ

ಗುರುವಾರ, 30 ಡಿಸೆಂಬರ್ 2010 (18:01 IST)
ರಾಜ್ಯದ 17 ಜಿಲ್ಲೆಗಳಲ್ಲಿ ಶುಕ್ರವಾರ ನಡೆಯಲಿರುವ ಎರಡನೇ ಹಂತದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಯಲು ಪೊಲೀಸ್ ಬಂದೋಬಸ್ತ್ ಜೊತೆಗೆ ರಾಜ್ಯ ಚುನಾವಣಾ ಆಯೋಗ ಕೂಡ ಎಲ್ಲಾ ರೀತಿಯ ಸಿದ್ಥತೆ ಮಾಡಿಕೊಂಡಿದೆ.

ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 14,233 ಮಂದಿ ಸಿವಿಲ್ ಪೊಲೀಸರು, 15 ಸಾವಿರ ಗೃಹ ರಕ್ಷಕ ಸಿಬ್ಬಂದಿ, ರಾಜ್ಯ ಮೀಸಲು ಪಡೆಯ 150 ತುಕಡಿಗಳಲ್ಲದೆ, ಜಿಲ್ಲಾ ಸಶಸ್ತ್ರ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಹಿಂದೆಂದಿಗಿಂತಲೂ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎ.ಆರ್.ಇನ್ಫೆಂಟ್ ಅವರು ತಿಳಿಸಿದ್ದಾರೆ.

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆಗಳ 595 ಜಿಲ್ಲಾ ಮತ್ತು 2161 ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ 5ರವರೆಗೆ ವ್ಯವಸ್ಥಿತ ಮತದಾನ ನಡೆಯಲಿದೆ.

ಮತದಾನ ನಡೆಯುವ 595 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ 2353 ಅಭ್ಯರ್ಥಿಗಳು, ತಾಲೂಕು ಪಂಚಾಯ್ತಿಯ 2161 ಕ್ಷೇತ್ರಗಳಲ್ಲಿ 7242 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, 1 ಕೋಟಿ 54 ಲಕ್ಷ 49 ಸಾವಿರದ 775 ಮಂದಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಾಗಿದೆ.

ವೆಬ್ದುನಿಯಾವನ್ನು ಓದಿ