ಚಾರಣಕ್ಕೆಂದು ತೆರಳಿದ್ದ ಮೂವರು ವಿದ್ಯಾರ್ಥಿಗಳು ನಾಪತ್ತೆ

ಶನಿವಾರ, 11 ಏಪ್ರಿಲ್ 2015 (17:40 IST)
ಪ್ರಕೃತಿ ಸೌಂದರ್ಯವನ್ನು ಸವಿಯುವ ಸಲುವಾಗಿ ಚಾರಣಕ್ಕೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕಾವೇರಿ ವನ್ಯಜೀವಿ ಪ್ರದೇಶದ ವ್ಯಾಪ್ತಿಯಲ್ಲಿರುವ ಹೂಕುಂದ ಅರಣ್ಯ ವಲಯದಲ್ಲಿ ನಡೆದಿದೆ. 
 
ಈ ಹೃದಯ ವಿದ್ರಾವಕ ಘಟನೆಯು ಕಳೆದ ಏಪ್ರಿಲ್ 2ರಂದು ನಡೆದಿದ್ದು, ತಾಲೂಕಿನ ಹನೂರು ಗ್ರಾಮದ ನಿವಾಸಿ ಅನಿಲ್ ಕುಮಾರ್(21), ಚಿಕ್ಕಆಲತ್ತೂರಿನ ಮಹಾದೇವ್(22) ಹಾಗೂ ಭದ್ರಯ್ಯನಹಳ್ಳಿ ನಿವಾಸಿ ಜಗದೀಶ್(22) ಎಂದು ಹೇಳಲಾಗಿದೆ. ಇವರು, ಹನೂರಿನ ಜಿ.ವಿ.ಗೌಡ ಪದವಿ ಕಾಲೇಜಿನಲ್ಲಿ ಬಿಬಿಎಂ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ.  
 
ಪ್ರಕರಣದ ವಿವರ: ಈ ಮೂವರೂ ವಿದ್ಯಾರ್ಥಿಗಳೂ ಕೂಡ ಪ್ರತೀ ವರ್ಷ ಚಾರಣ ಕೈಗೊಳ್ಳುತ್ತಿದ್ದರು ಎನ್ನಲಾಗಿದ್ದು, ಅರಣ್ಯ ಪ್ರದೇಶಕ್ಕೆ ತೆರಳಿ ಚಾರಣ ಮುಗಿಸಿಕೊಂಡು ಮೂರ್ನಾಲ್ಕು ದಿನಗಳ ಬಳಿಕ ವಾಪಾಸಾಗುತ್ತಿದ್ದರು. ಅಂತೆಯೇ ಈ ಬಾರಿಯೂ ಚಾರಣಕ್ಕೆಂದು ತೆರಳಿದ್ದರು. ಆದರೆ ಮೂವರಲ್ಲಿ ಯಾರೊಬ್ಬರೂ ಕೂಡ ಮನೆಗೆ ವಾಪಾಸಾಗಿಲ್ಲ ಎಂದು ವಿದ್ಯಾರ್ಥಿಗಳ ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ.  
 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಈ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ವನ್ಯ ಮೃಗಗಳ ಸಂಚಾರ ಹೆಚ್ಚಿದ್ದು, ಅವುಗಳ ದಾಳಿಯಿಂದಲೇ ಕಣ್ಮರೆಯಾಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. 
 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊಳ್ಳೇಗಾಲ ಪೊಲೀಸರು, ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ