ಮೂವರು ವೈದ್ಯ ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಹೇಗೆ?

ಶನಿವಾರ, 13 ಫೆಬ್ರವರಿ 2016 (17:28 IST)
ಮಂಡ್ಯದಲ್ಲಿ ಸೆಲ್ಫೀಗಳನ್ನು ಕ್ಲಿಕ್ ಮಾಡುವ ಕ್ರೇಜ್‌ಗೆ ಮೂವರ ಅಮೂಲ್ಯ ಜೀವಗಳು ಬಲಿಯಾಗಿವೆ. ಮೋಜಿಗಾಗಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅನಿರೀಕ್ಷಿತವಾಗಿ ನುಗ್ಗಿದ ನೀರಿನ ರಭಸಕ್ಕೆ ಕಾಲುವೆಯ ನೀರಿನಲ್ಲಿ ಮೂವರು ಕೊಚ್ಚಿಕೊಂಡು ಹೋಗಿ ಶವವಾದರು. ನಿನ್ನೆ ನಗರದ ಹೊರವಲಯದಲ್ಲಿ ದುರಂತ ಘಟನೆ ಸಂಭವಿಸಿದೆ.  ವಿಶ್ವೇಶ್ವರಯ್ಯ ನಾಲೆಯಲ್ಲಿ ನಿಂತು ಸೆಲ್ಫಿಗೆ ಫೋಸ್ ಕೊಡುತ್ತಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ರಭಸವಾಗಿ ನೀರು ನುಗ್ಗಿ ಬರುತ್ತದೆಂಬ ಕಲ್ಪನೆಯೂ ಇರಲಿಲ್ಲ. ಆದರೆ ಅನೇಕ ರೋಗಿಗಳನ್ನು ಗುಣಪಡಿಸಿ ಜೀವ ಉಳಿಸಬೇಕಿದ್ದ ಅವರೇ ವಿಧಿಯ ಕ್ರೌರ್ಯಕ್ಕೆ ಬಲಿಯಾದರು.
 
 ಘಟನೆ ನಡೆದಿದ್ದು ಹೇಗೆ?
ಐವರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪೂರೈಸಿದ್ದು ಗ್ರಾಮೀಣ ಸೇವೆಗೆ ಮತ್ತು ಸಮುದಾಯ ಆರೋಗ್ಯ ಸೇವೆ ಕಾರ್ಯಕ್ರಮದಲ್ಲಿ  ಇಂಟರ್ನ್‌ಶಿಪ್‌ಗೆ ನಿಯೋಜಿತರಾಗಿದ್ದರು. ಕೆರಗೋಡುವಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವರಿಗೆ ಸೂಚಿಸಲಾಗಿತ್ತು.
 
 ಕೆರಗೋಡುವಿಗೆ ಮೋಟರ್ ಬೈಕ್‌ನಲ್ಲಿ ಬಂದ ಎಲ್ಲಾ ಐದು ಮಂದಿ ಹಿಂತಿರುಗುವಾಗ ಕಾಲುವೆಗೆ ಇಳಿದು ಸೆಲ್ಫಿಗಳನ್ನು ಕ್ಲಿಕ್ಕಿಸತೊಡಗಿ  ಸ್ನೇಹಿತರಿಗೆ ಚಿತ್ರಗಳನ್ನು ಫಾರ್ವಾರ್ಡ್ ಮಾಡತೊಡಗಿದ್ದರು. ಶುಕ್ರವಾರ ಕೂಡ ಕಾಲುವೆಗೆ ಇಳಿದು ಸೆಲ್ಫೀ ಕ್ಲಿಕ್ಕಿಸುತ್ತಿದ್ದರು.  ಕಾಲುವೆ ದಂಡೆಯಲ್ಲಿ ಬೈಕ್‌ಗಳನ್ನು ಪಾರ್ಕ್ ಮಾಡಿ ಕಾಲುವೆಯ ಇನ್ನೊಂದು ಬದಿಗೆ ಸೆಲ್ಫೀ ಕ್ಲಿಕ್ಕಿಸಲು ಹೋಗಿದ್ದಾಗ ದಿಢೀರನೇ ನುಗ್ಗಿ ಬಂದ ನೀರಿನ ರಭಸಕ್ಕೆ ಈಜುವುದಕ್ಕೆ ಬಾರದ ಶೃತಿ, ಜೀವನ್ ಮತ್ತು ಗಿರೀಶ್ ಕೊಚ್ಚಿಕೊಂಡು ಹೋದರು. ಗೌತಮ್ ಮತ್ತು ಸಿಂಧುವನ್ನು ಸ್ಥಳೀಯರು ರಕ್ಷಿಸಿದರು.

ವೆಬ್ದುನಿಯಾವನ್ನು ಓದಿ