ಗ್ರಾ.ಪಂ. ಚುನಾವಣೆಗೆ ಮೂವರಿಂದ ನಾಮಪತ್ರ: ಬೇಸರಗೊಂಡ ಶ್ರೀಗಳಿಂದ ಪೀಠ ತ್ಯಾಗ

ಸೋಮವಾರ, 18 ಮೇ 2015 (15:30 IST)
ತಾಲೂಕಿನ ಬಬಲೇಶ್ವರ ಗ್ರಾಮ ಪಂಚಾಯತ್‌ನ್ನು ಪಟ್ಟಣ ಪಂಚಾಯತ್ ದರ್ಜೆಗೆ ಏರಿಸಬೇಕು ಎಂಬ ಒತ್ತಾಯದ ನಡುವೆಯೂ ಮೂವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಪರಿಣಾಮ ಇಲ್ಲಿನ ಗುರುಪಾದೇಶ್ವರ ಮಠದ ಪೀಠಾಧ್ಯಕ್ಷ ಮಹಾದೇವ ಶಿವಾಚಾರ್ಯ ಅವರು ಇಂದು ಪೀಠತ್ಯಾಗ ಮಾಡುವ ಮೂಲಕ ಕಣ್ಮರೆಯಾಗಿದ್ದಾರೆ. 
 
ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯು ಮೇ 29 ಹಾಗೂ ಜೂನ್ 2ರಂದು ನಡೆಯಲಿದ್ದು, ಈಗಾಗಲೇ ಕ್ಷೇತ್ರದ ಅಭ್ಯರ್ಥಿಗಳಾಗಿ ಮೂವರು ನಾಮಪತ್ರ ಸಲ್ಲಿಸುವ ಮೂಲಕ ಕಣಕ್ಕಿಳಿದಿದ್ದಾರೆ. ಇದರಿಂದ ಬೇಸರಗೊಂಡ ಶ್ರೀಗಳು ಪೀಠತ್ಯಾಗ ಮಾಡಿದ್ದು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಪ್ರಕರಣವೇನು?
ಈ ಹಿಂದೆ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆದಿತ್ತು ಎನ್ನಲಾಗಿದ್ದು, ಸಭೆಯಲ್ಲಿ ಪಂಚಾಯತ್‌ನ್ನು ಪಟ್ಟಣ ಪಂಚಾಯತ್ ದರ್ಜೆಗೆ ಏರಿಸುವವರೆಗೆ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾರೊಬ್ಬರೂ ಕೂಡ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿರ್ಧಾರದ ಜೊತೆಗೆ ಪ್ರಸ್ತುತದ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಡುವೆಯೂ ಮೂವರು ನಾಮಪತ್ರ ಸಲ್ಲಿಸಿರುವುದು ಶ್ರೀಗಳ ಮುನಿಸಿಗೆ ಕಾರಣವಾಗಿದೆ. 
 
ಇನ್ನು ಶ್ರೀಗಳು ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಭಕ್ತಾಧಿಗಳು ಶ್ರೀಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಭದ್ರತೆ ಒದಗಿಸಲಾಗಿದೆ. 

ವೆಬ್ದುನಿಯಾವನ್ನು ಓದಿ