75 ಹಾವುಗಳಿಗೆ ಜೀವದಾನ ನೀಡಿದ ನಂಜನಗೂಡಿನ ಭೂಪ...?!

ಮಂಗಳವಾರ, 31 ಮಾರ್ಚ್ 2015 (11:42 IST)
ಹಾವೆಂದರೆ ಭಯ ಪಡುವ ಜನರೇ ಹೆಚ್ಚು. ಆದರೆ ಹಾವಿನ ಮೊಟ್ಟೆ ತಂದು ಮರಿ ಮಾಡಿ ಪೋಷಿಸಿರುವುದನ್ನು ನೀವು ಕಂಡಿದ್ದೀರಾ... ಊಹು. ಆದರೆ ಅದಕ್ಕೆ ಉತ್ತಮ ನಿದರ್ಶನವೆಂಬಂತೆ ವ್ಯಕ್ತಿಯೋರ್ವರಿದ್ದು, ತಮ್ಮ ಸಾಹಸವನ್ನು ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
 
ಇಂತಹ ಅಪರೂಪದ ಸಂಗತಿ ಕಂಡು ಬಂದಿರುವುದು ಚಾಮರಾಜನಗರ ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ. ಇಲ್ಲಿನ ನಿವಾಸಿ ಚಂದ್ರಶೇಖರ್(40) ಎಂಬುವವರು ಎರಡು ತಿಂಗಳ ಹಿಂದೆ ತಮ್ಮ ಕಣ್ಣೆಗೆ ಬಿದ್ದಿದ್ದ 80 ಹಾವಿನ ಮೊಟ್ಟೆಗಳನ್ನು ತಮ್ಮ ನಿವಾಸಕ್ಕೆ ತಂದಿದ್ದರು. ಅಲ್ಲದೆ ಪುತ್ತೂರಿನ ರವೀಂದ್ರನಾಥ್ ಐತಾಳ್ ಎಂಬುವವರ ಮಾರ್ಗದರ್ಶನದೊಂದಿಗೆ ಅವುಗಳಿಗೆ ಕೃತಕ ಶಾಖ ನೀಡಿ ಪೋಷಿಸಿದ್ದರು. ಬಳಿಕ ಅವು ಮರಿಯಾಗಿ ಹೊರ ಬಂದಿವೆ. 
 
ಒಟ್ಟು 80 ಮೊಟ್ಟೆಗಳಿಗೆ ಶಾಖ ನೀಡಲಾಗುತ್ತಿತ್ತು. ಆದರೆ ಆ ಪೈಕಿ 75 ಮೊಟ್ಟೆಗಳು ಹೊಡೆದು ಮರಿಯಾಗಿವೆ. ಆರೋಗ್ಯವಾಗಿರುವ ಆ ಎಲ್ಲಾ ಹಾವಿನ ಮರಿಗಳು ನೀರಿನಲ್ಲಿ ವಾಸಿಸುವ ತಳಿ(ನೀರಾಳಾವು)ಗಳಾದ್ದರಿಂದ ಅವುಗಳನ್ನು ಕಪಿಲಾ ನದಿಗೆ ಬಿಟ್ಟು ಬಂದಿದ್ದಾರೆ. ಇನ್ನೂ 5 ಮೊಟ್ಟೆಗಳು ಮರಿಯಾಗಬೇಕಿದೆ. ಈ ಬಗ್ಗೆ ಚಂದ್ರಶೇಖರ್ ಅವರ ಸಾಧನೆಯನ್ನು ಕಂಡ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ