ತುಮಕೂರಿನಲ್ಲಿ ಬೀಡುಬಿಟ್ಟ 8 ಆನೆಗಳು: ಬೆಳೆ ನಾಶದಿಂದ ರೈತ ಕಂಗಾಲು

ಶುಕ್ರವಾರ, 6 ಮಾರ್ಚ್ 2015 (12:00 IST)
ಜಿಲ್ಲೆಯಲ್ಲಿ 8 ಆನೆಗಳಿರುವ ಮೂರು ತಂಡಗಳ ಆನೆ ಹಿಂಡು ಜಿಲಿಲೆಯ ಹಲವೆಡೆ ಸಂಚರಿಸುವ ಮೂಲಕ ಬೀಡು ಬಿಟ್ಟಿದ್ದು, ರೈತರ ಸಾಕಷ್ಟು ಬೆಳೆಗಳನ್ನು ಹಾಳು ಮಾಡುತ್ತಿವೆ. 
 
ಕಳೆದ ಹಲವು ತಿಂಗಳುಗಳಿಂದ ಒಂದಲ್ಲಾ ಒಂದು ಕಡೆ ಕಾಣಿಸಿಕೊಳ್ಳುತ್ತಿರುವ ಆನೆಗಳು, ರೈತರ ಸಾಕಷ್ಟು ಬೆಳಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿವೆ. ಇದರಿಂದ ಬೇಸತ್ತಿರುವ ರೈತರು, ಈ ಆನೆಗಳನ್ನು ಓಡಿಸಲು ಅರಣ್ಯಾಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯಿಂದ ನಮ್ಮ ಬೆಳೆಗಳು ಹಾಳಾಗುತ್ತಿವೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನೂ ಒದಗಿಸಿಲ್ಲ. ಆದ್ದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರವೇ ನಮಗೆ ವರ್ಷಕ್ಕೆ ಇಂತಿಷ್ಟು ಎಂದು ಹಣ ನೀಡಲಿ. ಬಳಿಕ ಬೆಳೆಯನ್ನೇ ಇಡದೆ ಸುಮ್ಮನಾಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 
ಇನ್ನು ಈ ಆನೆಗಳನ್ನು ಓಡಿಸಲು ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದೇವಾದರೂ ಕೂಡ ಅವು ಜಿಲ್ಲೆಯಲ್ಲಿಯೇ ಸಂಚರಿಸುತ್ತಿವೆ. ಬೇರೆಡೆಗೆ ಹೋಗುತ್ತಿಲ್ಲ. ಇದಕ್ಕೆ ಏನು ಮಾಡುವುದು ಎಂದೂ ತಿಳಿಯುತ್ತಿಲ್ಲ ಎಂದು ಅರಣ್ಯಾಧಿಕಾರಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. 
 
ಇನ್ನು ಈ ಆನೆಗಳು ಜಿಲ್ಲೆಯ ತಾಲೂಕುಗಳಾದ ತುರುವೇಕೆರೆ, ಗುಬ್ಬಿ ಹಾಗೂ ತುಮಕೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಿದಾಡುತ್ತಿದ್ದು, ಮೂರು ಗುಂಪುಗಳಾಗಿ ಓಡಾಡುತ್ತಿವೆ. ಒಟ್ಟಾರೆ ಆನೆಗಳ ಈ ಕಾಟದಿಂದ ರೈತ ದಿಕ್ಕು ತೋಚದೆ ಕಂಗಾಲಾಗಿದ್ದಾನೆ. 

ವೆಬ್ದುನಿಯಾವನ್ನು ಓದಿ