ಸಾವಿನ ಮನೆಯಾಗಿ ವಾಣಿವಿಲಾಸ ಆಸ್ಪತ್ರೆ: 10 ದಿನಗಳಲ್ಲಿ 8 ಬಾಣಂತಿಯರ ಸಾವು

ಗುರುವಾರ, 26 ನವೆಂಬರ್ 2015 (14:30 IST)
ವಾಣಿವಿಲಾಸ ಆಸ್ಪತ್ರೆಯಲ್ಲಿ 10 ದಿನಗಳಲ್ಲಿ 8 ಬಾಣಂತಿಯರ ಸಾವನ್ನಪ್ಪಿರುವ ಘಟನೆಯಿಂದ ವಾಣಿವಿಲಾಸ ಆಸ್ಪತ್ರೆಗೆ ಸೇರುವ ಬಾಣಂತಿಯರಲ್ಲಿ ಆತಂಕ ಛಾಯೆ ಕವಿದಿದೆ.  ವಾಣಿವಿಲಾಸ ಆಸ್ಪತ್ರೆ ಬಾಣಂತಿಯರ ಸಾವಿನ ಮನೆಯಾಗಿದ್ದು,  ಪ್ರತಿ ತಿಂಗಳು ಐದು ತಾಯಂದಿರ ಸಾವು ಗ್ಯಾರಂಟಿಯಾಗಿದೆ. ಈ ಕುರಿತು  ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾಧ್ಯಮದ ಜತೆ ಮಾತನಾಡುತ್ತಾ,  ಹೈರಿಸ್ಕ್ ಕೇಸುಗಳು ಬರುವುದರಿಂದ ಹೀಗಾಗುತ್ತಿದೆ.
 
 
ಪ್ರತಿ ತಿಂಗಳೂ 160ಕ್ಕೂ ಹೆಚ್ಚು ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಸಿಜೇರಿಯನ್ ಮಾಡಿಸಿಕೊಂಡ ಕೆಲವು ಬಾಣಂತಿಯರ ಸಾವು ಸಂಭವಿಸುತ್ತಿದೆ.  ಸರಣಿ ಸಾವಿನ ತನಿಖೆ ನಡೆಸಲು ನಾಲ್ಕು ವೈದ್ಯರ ತಂಡ ರಚಿಸಲಾಗಿದೆ ಎಂದು ಹೇಳಿದರು.  ವೈದ್ಯಾಧಿಕಾರಿಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.  ನವೆಂಬರ್‌ 7ರಿಂದ 17 ತಾರೀಖೀನ ಅಂತರದಲ್ಲಿ ಈ ಘಟನೆ ಜರುಗಿದ್ದು,  ಘಟನೆ ತಡವಾಗಿ ಬೆಳಕಿಗೆ ಬಂದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಪ್ರಕರಣ ಸಂಬಂಧ ಸಮಿತಿಯನ್ನು ರಚಿಸಿದರು. 
 
ಆಸ್ಪತ್ರೆಯ ದಾಖಲೆಗಳ ಪ್ರಕಾರ ನವೆಂಬರ್‌ 7 ಮತ್ತು 17ರ ನಡುವೆ ಸಾವನ್ನಪ್ಪಿದವರು ನಸೀಮ್‌,  ಶಶಿಕಲಾ,  ,ಸುಮೇರಾ ಭಾನು,  ನಂದಾ,  ರೇಷ್ಮಾ ಭಾನು ಮತ್ತು ಮುಬಿನಾ ಎಂದು ಗುರುತಿಸಲಾಗಿದೆ. 
 
ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೆ ಸಾವಿರಕ್ಕೂ ಹೆಚ್ಚು ಹೆರಿಗೆಗಳು ನಡೆಯುತ್ತವೆ. ಸಿಜೇರಿಯನ್ ಶಸ್ತ್ರಚಿಕಿತ್ಸೆಯಲ್ಲಿ ಇಂಜೆಕ್ಷನ್‌ ದುಷ್ಪರಿಣಾಮವೇ ಅಥವಾ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ಸೋಂಕಿನಿಂದ ಈ ಸಾವು ಸಂಭವಿಸಿದೆಯೇ ಎನ್ನುವುದು ತನಿಖೆಯ ನಂತರವೇ ತಿಳಿದುಬರಲಿದೆ.  ಸಮಿತಿಯ ವೈದ್ಯರು ಅದೇ ಆಸ್ಪತ್ರೆಗೆ ಸೇರಿದ್ದರಿಂದ  ನಿಷ್ಪಕ್ಷಪಾತ ತನಿಖೆಯ ವರದಿ ಬರುವ ಬಗ್ಗೆ ಅನುಮಾನ ಮೂಡಿದೆ. 
 

ವೆಬ್ದುನಿಯಾವನ್ನು ಓದಿ