8ನೇ ದಿನದ ಮುಂಗಾರು ಅಧಿವೇಶ: ರಣರಂಗ ಸೃಷ್ಟಿಸಲು ಪ್ರತಿಪಕ್ಷಗಳ ಚಿಂತನೆ

ಬುಧವಾರ, 8 ಜುಲೈ 2015 (11:48 IST)
ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನವು 8 ದಿನಕ್ಕೆ ಕಾಲಿಟ್ಟಿದ್ದು, ಇಂದು ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 371(ಜೆ) ಕಲಂ ಬಗ್ಗೆ ಚರ್ಚೆಯಾಗಲಿದೆ.  
 
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರದ ಲೋಖೋಪಯೋಗಿ ಇಲಾಖೆಯಿಂದ ಯಾವ ಕ್ರಮಗಳನ್ನು ಕೈಗೊಂಡಿದೆ, ಯಾವ ಯಾವ ಬೇಡಿಕೆಗಳಿವೆ ಎಂಬ ಬಗ್ಗೆ ಸದನದಲ್ಲಿ ಚರ್ಚೆಯಾಗಲಿದ್ದು, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಸರ್ಕಾರದ ಸಚಿವರು ಉತ್ತರಿಸಲಿದ್ದಾರೆ. ಅಲ್ಲದೆ ಇದೇ ವೇಳೆ ಅಭಿವೃದ್ಧಿಗೆ ಅಡ್ಡಿಯಾಗಿರುವ ಕಾನೂನು ತೊಡಕಿನ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. 
 
ನಂಜುಂಡಪ್ಪ ವರದಿಯಲ್ಲಿನ ತಪ್ಪುಗಳ ಬಗ್ಗೆ ಕೂಡ ಚರ್ಚೆಯಾಗಲಿದ್ದು, ಈ ಸಂಬಂಧ ಸರ್ಕಾರ ಅನುಸರಿಸುತ್ತಿರುವ ತಪ್ಪುಗಳು ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸೂತ್ರಗಳ ಬಗ್ಗೆ ಚರ್ಚೆಯಾಗಲಿದೆ. ಅಂತೆಯೇ ಮಂಗಳೂರು ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ, ಏಕೈಕ ರಸ್ತೆಯಾಗಿರುವ ಶಿರಾಡಿ ಘಾಟ್ ರಸ್ತೆಯ ಕಾಮಗಾರಿಯನ್ನು ಆದಷ್ಟು ಬೇಗ ಸಂಪೂರ್ಣಗೊಳಿಸಿ ಕೂಡಲೇ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಪರ್ತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಲಿವೆ.   
 
ಇನ್ನು ವಿಧಾನ ಪರಿಷತ್‌ನಲ್ಲಿ ಕಳೆದ ಎರಡು ದಿನಗಳಿಂದ ಕೋಲಾಹಲಕ್ಕೆ ಕಾರಣವಾಗಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಹಾಸಿಗೆ ಹಾಗೂ ದಿಂಬು ಖರೀದಿಯಲ್ಲಿ 19 ಕೋಟಿ ಅಕ್ರಮ ನಡೆದಿದೆ ಎಂಬ ಪ್ರಕರಣವನ್ನು ಪ್ರತಿಪಕ್ಷಗಳು ವಿಧಾನಸಭೆಯಲ್ಲಿಯೂ ಕೂಡ ಪ್ರಸ್ತಾಪಿಸಲಿದ್ದು, ಪ್ರಕರಣ ಸಂಬಂಧ ಸಮಿತಿ ರಚಿಸುವಂತೆ ಆಗ್ರಹಿಸಿ ಧರಣಿಯನ್ನು ಮುಂದವರಿಸಲು ನಿರ್ಧರಿಸಿವೆ. 

ವೆಬ್ದುನಿಯಾವನ್ನು ಓದಿ