ಕೃಷ್ಣಾ ನದಿ ಪ್ರವಾಹದಲ್ಲಿ 600 ಮೀಟರ್‌ ಈಜಿ ದಡ ಸೇರಿದ 9 ತಿಂಗಳ ತುಂಬು ಗರ್ಭಿಣಿ

ಶುಕ್ರವಾರ, 1 ಆಗಸ್ಟ್ 2014 (12:24 IST)
ಆಕೆ 9 ತಿಂಗಳ ತುಂಬು ಗರ್ಭಿಣಿ. ಯಾವುದೇ ಕ್ಷಣದಲ್ಲಿ ಹೆರಿಗೆಯಾಗುವ ಪರಿಸ್ಥಿತಿ ಅವಳದು. ಕೃಷ್ಣಾ ನದಿ ಪ್ರವಾಹದಲ್ಲಿ ಇಡೀ ಗ್ರಾಮವೇ ಮುಳುಗುವ ಭೀತಿ ಆಕೆ ಮತ್ತು ಆಕೆಯ ಗ್ರಾಮಸ್ಥರಿಗೆ. ಆಕೆ ಆ ಕಡೆ ಹೋಗುವಂತಿಲ್ಲ. ವೈದ್ಯರು ಈ ಕಡೆ ಬರುವಂತಿಲ್ಲ. ಇಲ್ಲೇ ಹೆರಿಗೆಯಾದರೆ ಏನು ಗತಿ ಎಂಬುದು ಆಕೆಯ ಚಿಂತೆ. ಅದಕ್ಕೆ ಆಕೆ ಮಾಡಿದ್ದೇನು ಗೊತ್ತೆ... ನೇರವಾಗಿ ಕೃಣ್ಣಾ ಪ್ರವಾಹದಲ್ಲಿ ಧುಮುಕಿದ್ದು. 

ಪ್ರವಾಹದ ನೀರಿನಲ್ಲಿ ಎಂತಹ ಕುಶಲ ನುರಿತ ಈಜುಗಾರರೂ  ಕೂಡ ಈಜಲು ಹೆದರುತ್ತಾರೆ. ಹೇಳಿ ಕೇಳಿ ಆಕೆ ಎದ್ದು ನಡೆಯುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿರುವ ತುಂಬು ಗರ್ಭಿಣಿ.  ಆದರೆ ಅತಿ ಆತ್ಮವಿಶ್ವಾಸದ ಆಕೆ ಕೃಷ್ಣಾ ನದಿ ಪ್ರವಾಹದಲ್ಲಿ 600 ಮೀಟರ್‌ ಈಜಿ ದಡ ಸೇರಿದ್ದಾಳೆ..! ಎಂದರೆ ನಂಬುತ್ತೀರಾ...??
 
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನ ಗುಡ್ಡೆ ಗ್ರಾಮದ ಯಲ್ಲವ್ವ ಗಡ್ಡಿ ಎಂಬಾಕೆಯೇ ಆ ದಿಟ್ಟ ಮಹಿಳೆ.  ಪ್ರವಾಹದಿಂದಾಗಿ ನೀಲಕಂಠರಾಯನಗಡ್ಡೆ ಜನ ಸಂಪರ್ಕ ಕಳೆದುಕೊಂಡಿದೆ. ಆದರೆ ತನ್ನ ಹೆರಿಗೆಯ ದಿನ ಹತ್ತಿರ ಬಂದಿರುವಾಗ ಇಲ್ಲೇ ಇದ್ದರೆ ಕಷ್ಟವಾಗುತ್ತದೆ ಎಂಬ ಮುನ್ನೆಚ್ಚರಿಕೆಯಿಂದಾಗಿ  ಯಲ್ಲವ್ವ ಉಕ್ಕಿ ಹರಿಯುತ್ತಿರುವ ಕೃಷ್ಣ ನದಿಗೆ ಹಾರಿ ಈಜಿ ದಡ ಸೇರಿದ್ದಾಳೆ.  
 
ಈ ಊರಿನವರಿಗೆ ನದಿ ದಾಟಲು ಯಾವ ಸೌಕರ್ಯವೂ ಇಲ್ಲದ ಕಾರಣ  ಪಕ್ಕದ ಊರಿಗೆ ಬರಲು ಸುಮಾರು 600 ಮೀ. ನದಿ ದಾಟಿಯೇ ಬರಬೇಕು. ಆ ಊರಿನಲ್ಲಿ ಆಸ್ಪತ್ರೆ ಇಲ್ಲ. ಗರ್ಭಿಣಿ ಯಲ್ಲವ್ವನಿಗೆ 9 ತಿಂಗಳು ತುಂಬಿದ್ದು,  ನೀರಿನಂದಾವೃತವಾದ ಗ್ರಾಮಕ್ಕೆ ವೈದ್ಯರು ಬರಲಾಗದು. ಹೀಗಾಗಿ ಸುಸೂತ್ರ ಹೆರಿಗೆಗಾಗಿ  ಪಕ್ಕದ ಊರಿಗೆ ಹೋಗುವುದು ಯಲ್ಲವ್ವನಿಗೆ ಅನಿವಾರ್ಯವಾಗಿತ್ತು. ಆದರೆ ನದಿ ದಾಟುವುದು ಹೇಗೆ??  
 
ಆಕೆಗಿದ್ದುದು ಒಂದೇ ದಾರಿ. ಆದರೆ 9 ತಿಂಗಳ ತುಂಬಿ ಗರ್ಭಿಣಿ ಎಂಬ ವಿಚಾರಕ್ಕೆ ಬಂದರೆ ಅದು ಅಸಾಧ್ಯ, ಅಪಾಯಕಾರಿ ನಿರ್ಧಾರ. ಆದರೆ ಅನಿವಾರ್ಯತೆ ಮತ್ತು ಅಲ್ಲೇ ಹೆರಿಗೆಯಾದರೆ ಅಪಾಯ ಎಂಬ ಕಾರಣಕ್ಕೆ ದೃಢ ನಿರ್ಧಾರ ಮಾಡಿದ ಗರ್ಭಿಣಿ ಯಲ್ಲವ್ವ ಗಡ್ಡಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಬುಧವಾರ ಸಂಜೆ ಪ್ರವಾಹದಲ್ಲಿ ಈಜಿ ಹತ್ತಿರದ ಗ್ರಾಮವೊಂದರ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಾರೆ. 
 
ಆಕೆಯ ಧೈರ್ಯ ಎಂತವರು ಮೆಚ್ಚುವಂತದ್ದು, ಸ್ಪೂರ್ತಿದಾಯಕ ಸಾಹಸ .... ಏನಂತೀರಾ?

ವೆಬ್ದುನಿಯಾವನ್ನು ಓದಿ