ಮೆಟ್ರೋ ಕಾಮಗಾರಿಯಿಂದ 950 ಕೋಟಿ ನಷ್ಟ: ಹೆಚ್‌ಡಿಕೆ ಆರೋಪ

ಶುಕ್ರವಾರ, 27 ಮಾರ್ಚ್ 2015 (13:37 IST)
ನಗರದ ಬೈಯಪ್ಪನಹಳ್ಳಿ-ಎಂ.ಜಿ.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮೆಟ್ರೋ ಕಾಮಗಾರಿ ಕುರಿತು ಇಂದಿನ ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಜೆಡಿಎಲ್‌ಪಿ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿಯವರು ಪ್ರತಿಕ್ರಿಯಿಸಿದ್ದು, ಸರ್ಕಾರವು ತನಗೆ ಹಾಗೂ ಮೆಟ್ರೋ ಕಾಮಗಾರಿಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ಸರ್ಕಾರವನ್ನು ಆರೋಪಿಸಿದರು. 
 
ವಿಧಾನಸಭೆಯ ಚರ್ಚಾ ವೇಳೆಯಲ್ಲಿ ಮಾತನಾಡಿದ ಅವರು, ನಗರದ ಬೈಯಪ್ಪನಹಳ್ಳಿ-ಎಂ.ಜಿ.ರಸ್ತೆ ಮಾರ್ಗದ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಸರ್ಕಾರ ತನಗೂ ಮತ್ತು ಕಾಮಗಾರಿಗೆ ಸಂಬಂಧವೇ ಇಲ್ಲ ಎಂಬಂತೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು. 
 
ಇದೇ ವೇಳೆ, ಕಾಮಗಾರಿಯ ಅಂಡರ್ ಗ್ರೌಂಡ್ ನಿರ್ಮಾಣದ ಗುತ್ತಿಗೆದಾರರು ಕಾಮಗಾರಿಯನ್ನು ನಿರ್ಮಾಣದಲ್ಲಿ ವಿಳಂಬ ಮಾಡುತ್ತಿದ್ದಾರೆ. ಅಲ್ಲದೆ ಅವರಲ್ಲಿ ಕೆಲವರನ್ನು ಈ ಹಿಂದೆ ಬ್ಲ್ಯಾಕ್ ಲಿಸ್ಟ್‌ನಲ್ಲಿ ಇಡಲಾಗಿತ್ತು. ಆದರೆ ಸರ್ಕಾರ ಅವರಿಗೇ ಗುತ್ತಿಗೆ ನೀಡಿದೆ. ಅದೂ ಅಲ್ಲದೆ ಕಿ.ಮೀ ಲೆಕ್ಕದಲ್ಲಿ ಗುತ್ತಿಗೆ ನೀಡಲಾಗಿದ್ದು, ಅಂದಾಜಿಸಿರುವ ವೆಚ್ಚ ಖರ್ಚಿಗಿಂತಲೂ ದುಬಾರಿಯಾಗಿದೆ. ಈ ಪರಿಣಾಮ ಸರ್ಕಾರಕ್ಕೆ 950 ಕೋಟಿ ನಷ್ಟ ಎದುರಾಗಲಿದೆ. ಅಲ್ಲದೆ ಕಾಮಗಾರಿ ಪೂರ್ಣಕ್ಕೆ ಗುತ್ತಿಗೆದಾರರು ಸತಾಯಿಸುತ್ತಿದ್ದು, 12 ತಿಂಗಳು ತಡವಾಗಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು. 
 
ಬಳಿಕ, ಈ ಹಿಂದೆ ಕಾಮಗಾರಿಯ ಮೇಲುಸ್ತುವಾರಿ ವಹಿಸಿದ್ದ ಐಎಎಸ್ ಅಧಿಕಾರಿಯೋರ್ವರು ಯೋಜನೆಗೆಂದು ಮೀಸಲಿಡಲಾಗಿದ್ದ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆ ಜಮಾ ಮಾಡಿಕೊಂಡಿದ್ದರು. ಬಳಿಕ ಕೊಳ್ಳೆ ಹೊಡೆದ ಹಣವನ್ನು ಮ್ಯೂಚ್ಯುಯಲ್ ಫಂಡ್ ನಲ್ಲಿ ತೊಡಗಿಸಿ ನಷ್ಟ ಅನುಭವಿಸಿದರು. ಬಳಿಕ ಬಿಡಿಎಯ ಹಣಕಾಸು ವಿಭಾಗದ ಸದಸ್ಯ ಸ್ಥಾನಕ್ಕೆ ವರ್ಗಾಯಿಸಿಕೊಂಡು ಅಲ್ಲಿ ಹಣ ಕೊಳ್ಳೆ ಹೊಡೆದು ಮೆಟ್ರೋ ಹಣವನ್ನು ತುಂಬಿಸಿದರು ಎಂದು ಹೇಸರು ಹೇಳದೆ ಆರೋಪಿಸಿದ ಅವರು, ಇದೆಲ್ಲಾ ನಡೆಯುತ್ತಿದ್ದರೂ ಕೂಡ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ ಎಂದು ಪ್ರಶ್ನಿಸಿದರು.  

ವೆಬ್ದುನಿಯಾವನ್ನು ಓದಿ