ಜಾತಿ ಸಮೀಕ್ಷೆ ಶೇ 99.46ರಷ್ಟು ಯಶಸ್ವಿ: ಆಂಜನೇಯ

ಮಂಗಳವಾರ, 19 ಮೇ 2015 (14:28 IST)
ರಾಜ್ಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಜಾತಿ ಸಮೀಕ್ಷೆ ಮುಗಿದಿದ್ದು, ಪ್ರಸ್ತುತ ಡಾಟಾ ಎಂಟ್ರಿ ಕಾರ್ಯ ಆರಂಭವಾಗಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವ ಆಂಜನೇಯ ತಿಳಿಸಿದ್ದಾರೆ.
 
ವಿದಾನಸೌಧದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಶೇ 99.46ರಷ್ಟು ಪೂರ್ಣಗೊಂಡಿದ್ದು, ಯಶಸ್ವಿಯಾಗಿದೆ. ಇನ್ನು ಬೆಂಗಳೂರಿನಂತಹ ಮಹಾನಗರದಲ್ಲಿಯೂ ಕೂಡ ಶೇ. 99.86ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಈ ಸಮೀಕ್ಷೆಯಲ್ಲಿ 1.20ಕೋಟಿ ಕುಂಟುಂಬಗಳ ಮಾಹಿತಿ ಕಲೆ ಹಾಕಲಾಗಿದ್ದು, ಪ್ರಸ್ತುತ ಡಾಟಾ ಎಂಟ್ರಿ ಕಾರ್ಯ ಆರಂಭವಾಗಿದೆ. ಅಲ್ಲದೆ ಈಗಾಗಲೇ ಶೇ.50ರಷ್ಟು ಡಾಟಾ ಎಂಟ್ರಿ ಕಾರ್ಯವೂ ಮುಗಿದಿದೆ ಎಂದರು. 
 
ಇದೇ ವೇಳೆ, ತಮ್ಮ ಕುಟುಂಬದ ಬಗ್ಗೆ ಇನ್ನೂ ಮಾಹಿತಿ ನೀಡದವರಿದ್ದರೆ ಅಂತಹವರು ಅಧಿಕಾರಿಗಳನ್ನು ಕಚೇರಿಯಲ್ಲಿಯೇ ಭೇಟಿ ಮಾಡಿ ಮೇ 27ರ ಒಳಗೆ ಮಾಹಿತಿ ನೀಡಿ ಎಂದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೆ ವಾರ್ಡ್ ಕಚೇರಿಗಳಲ್ಲಿ ಅಥವಾ ಗ್ರಾಮೀಣ ಪ್ರದೇಶದ ನಿವಾಸಿಗಳಾಗಿದ್ದಲ್ಲಿ ತಹಶೀಲ್ದಾರ್‌ರವರ ಕಚೇರಿಯಲ್ಲಿ ಮಾಹಿತಿ ದಾಖಲಿಸಿ ಎಂದು ಸೂಚಿಸಿದ್ದಾರೆ. 
 
ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಯಾವ ಜಾತಿಗೆ ಸೇರಿದ ಕುಟುಂಬಗಳಿವೆ ಎಂದು ತಿಳಿದಲ್ಲಿ ಆ ಪ್ರಕಾರ ಸರ್ಕಾರದ ಯೋಜನೆಗಳಲ್ಲಿ ಮೀಸಲಾತಿ ಒದಗಿಸಬಹುದು ಎಂಬ ದೃಷ್ಟಿಯಿಂದ ಸರ್ಕಾರ ಸಮೀಕ್ಷೆಗೆ ಮುಂದಾಗಿತ್ತು. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದೂ ಇದೆ. 

ವೆಬ್ದುನಿಯಾವನ್ನು ಓದಿ