ಅಪಾರ್ಟ್‌ಮೆಂಟ್ ಆಮಿಷವೊಡ್ಡಿ 7.5 ಕೋಟಿ ವಂಚನೆ: ಗ್ರಾಹಕರು ಕಂಗಾಲು

ಶನಿವಾರ, 4 ಜುಲೈ 2015 (16:43 IST)
ಅಪಾರ್ಟ್‌ಮೆಂಟ್ ನೀಡುವುದಾಗಿ ಆಮಿಷವೊಡ್ಡಿ ಗ್ರಾಹಕರಿಂದ 7.5 ಕೋಟಿಗೂ ಅಧಿಕ ಹಣವನ್ನು ಪಡೆದು ವಂಚಿಸಿರುವ ಬಿಲ್ಡರ್ ಓರ್ವರ ವಿರುದ್ಧ ಪ್ರಸ್ತುತ ಮೋಸಕ್ಕೊಳಗಾದ ಗ್ರಾಹಕರು ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. 
 
ಏನಿದು ಪ್ರಕರಣ?:
ನಗರದ ಬಿಲ್ಡ್ರ್ ಶ್ರೀನಿವಾಸ್ ಮೂರ್ತಿ ಎಂಬುವವರು ಅಪಾರ್ಟ್‌ಮೆಂಟ್ ನಿರ್ಮಿಸಿಕೊಡುವುದಾಗಿ ಹೇಳಿ ಗ್ರಾಹಕರಿಂದ 8ರಿಂದ 10 ಲಕ್ಷದ ವರೆಗೆ ಹಣ ಪಡೆದಿದ್ದರು. ಹೀಗೆ ಸುಮಾರು 7.5 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅಪಾರ್ಟ್‌ಮೆಂಟ್ ಕಾಮಗಾರಿ ಕಾರ್ಯ  ಸ್ಥಗಿತಗೊಳಿಸಲಾಗಿತ್ತು. ಇದರಿಂದ ಆತಂಕಗೊಂಡ ಗ್ರಾಹಕರು, ಬಿಲ್ಡರ್‌ನ್ನು ಶೋಧಿಸಿದ್ದಾರೆ. ಆದರೆ ಅವರು ಗ್ರಾಹಕರಿಗೆ ಸಿಗುತ್ತಿಲ್ಲ. ಈ ಕಾರಣದಿಂದ ಭಯಭೀತರಾದ ಗ್ರಾಹಕರು ಪ್ರಸ್ತುತ ಕೋರ್ಟ್ ಮೆಟ್ಟಿಲೇರಿದ್ದು, ಬಿಲ್ಡರ್ ವಿರುದ್ಧ ದೂರು ದಾಖಲಿಸಿದ್ದಾರೆ. 
 
ಇನ್ನು ಬಿಲ್ಡರ್ ಅಪಾರ್ಟ್‌ಮೆಂಟ್ ನಿರ್ಮಾಣ ಜಾಗವನ್ನೂ ಕೂಡ ಒಪ್ಪಂದದ ಮೇರೆ ಬಾಡಿಗೆ ಪಡೆದಿದ್ದ ಜಾಗವಾಗಿತ್ತು ಎನ್ನಲಾಗಿದ್ದು, ಪ್ರಸ್ತುತ ಬಿಲ್ಡರ್ ತಲೆ ಮರೆಸಿಕೊಂಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಗ್ರಾಹಕರು ಹಣ ನೀಡಿ ಮೋಸಕ್ಕೊಳಗಾಗಿದ್ದಾರೆ. 
 
ಬಾಲಾಜಿ ಬಿಲ್ಡರ್ ಕಂಪನಿಗೆ ಸೇರಿದ ಅಪಾರ್ಟ್‌ಮೆಂಟ್ ಇದಾಗಿದ್ದು, ನಗರದ ಚಂದಾಪುರ ಬಳಿಯಲ್ಲಿ ಚೈತ್ರಾ ಟವರ್ ಎಂಬ ಹೆಸರಿನಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ