ಗ್ರಾಮದ ಹೊರಗಿದ್ದ ಯುವತಿಯ ಎಳೆದೊಯ್ದು ತಾಳಿ ಕಟ್ಟಿದ ಭೂಪ ?

ಬುಧವಾರ, 30 ಸೆಪ್ಟಂಬರ್ 2015 (12:23 IST)
ಋತುಮತಿಯಾಗಿದ್ದಾಳೆ ಎಂಬ ಕಾರಣಕ್ಕೆ ಹಳೆಯ ನಂಬಿಕೆಯಂತೆ ಊರಿನ ಹೊರಗೆ ಗುಡಿಸಲಿನಲ್ಲಿರಿಸಲಾಗಿದ್ದ ಯುವತಿಯೋರ್ವಳನ್ನು ದುಷ್ಕರ್ಮಿಗಳ ತಂಡವೊಂದು ಆಕೆಯನ್ನು ಅಪಹರಿಸಿಕೊಂಡು ಹೋಗಿ ತಾಳಿ ಕಟ್ಟಿ ಬಳಿಕ ಪರಾರಿಯಾಗಿರುವ ಘಟನೆ ಕಳೆದ ಸೆ.26ರ ರಾತ್ರಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. 
 
ಈ ಪ್ರಕರಣದಲ್ಲಿ 6 ರಿಂದ 8 ಮಂದಿ ಇದ್ದ ತಂಡ ಭಾಗಿಯಾಗಿದ್ದು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇವರಲ್ಲಿ ನಾಲ್ವರು ದುಷ್ಕರ್ಮಿಗಳು ಯುವತಿಗೆ ಪರಿಚಯವಿದ್ದು ಗ್ರಾಮದವರೇ ಆಗಿದ್ದಾರೆ. ಇತರೆ ನಾಲ್ವರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ. 
 
ಯುವತಿಯ ಹೇಳಿಕೆ ಪ್ರಕಾರ, ಋತುಮತಿಯಾಗಿದ್ದ ಕಾರಣ ನನ್ನನ್ನು ಗ್ರಾಮದ ಹೊರ ವಲಯದಲ್ಲಿ ಗುಡಿಸಲಿನಲ್ಲಿರಿಸಲಾಗಿತ್ತು. ಈ ವೇಳೆ 8 ಮಂದಿ ಇದ್ದ ತಂಡವೊಂದು ನನ್ನ ಮೇಲೆ ಹಲ್ಲೆ ನಡೆಸಿ ಬಾಯಿಗೆ ಬಟ್ಟೆ ತುರುಕಿ ಕೈ ಕಾಲನ್ನು ಬಂಧಿಸಿ ಕಾಡಿಗೆ ಎಳೆದೊಯ್ದರು. ಬಳಿಕ ರಾತ್ರಿ 11 ಗಂಟೆ ವೇಳೆಯಲ್ಲಿ ನನ್ನ ಮೇಲೆ ತಣ್ಣೀರನ್ನು ಸುರಿದರು. ಬಳಿಕ ಆ ತಂಡದಲ್ಲಿ ಓರ್ವ ನನಗೆ ತಾಳಿ ಕಟ್ಟಿದ. ತರುವಾಯ ನನ್ನನ್ನು ಅವರೇ ಗುಡಿಸಲಿಗೆ ತಂದು ಬಿಟ್ಟು ಹೋದರು ಎಂಬುದಾಗಿ ಹೇಳಿಕೆ ನೀಡಿದ್ದಾಳೆ. 
 
ಈ ಮೂಲಕ ಋತುಮತಿಯರಾದ ಮಹಿಳೆಯರನ್ನು ಗ್ರಾಮದ ಹೊರ ಇರಿಸುವ ಹಿಂದಿನ ಕಂದಾಚಾರ ಪದ್ಧತಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಇನ್ನೂ ಜಾರಿಯಲ್ಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಇದು ಆಘಾತಕ್ಕೆ ಕಾರಣವಾಗಿದೆ. ಅಲ್ಲದೆ ಸರ್ಕಾರ ಇದನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಹಾಸನ, ತುಮಕೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಇತರೆಡೆ ಇದ್ದ ಈ ಅನಿಷ್ಟ ಪದ್ಧತಿಯನ್ನು ತಹಬದಿಗೆ ತಂದಿದೆ. 
 
ಈ ಸಂಬಂಧ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ