ದೆಹಲಿ ಜನತೆಗೆ ಎಎಪಿಯಿಂದ ಬಂಪರ್ ಕೊಡುಗೆ: ಉಚಿತ ನೀರು, ವಿದ್ಯುತ್...?!

ಬುಧವಾರ, 25 ಫೆಬ್ರವರಿ 2015 (18:55 IST)
ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ಆಮ್ ಆದ್ಮಿ ಪಕ್ಷ ತನ್ನ ನೆಚ್ಚಿನ ದೆಹಲಿ ಮತದಾರರಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದು, ಉಚಿತ ನೀರು ಹಾಗೂ ಕನಿಷ್ಟ ಮಟ್ಟದ ವಿದ್ಯುತ್ ಬಿಲ್ ಪಾವತಿಯನ್ನು ಘೋಷಿಸಿದೆ.
 
ಹೌದು, ಜನರ ಆಲೋಚನೆಯಲ್ಲಿರುವ ಎಲ್ಲಾ ಸಮಸ್ಯೆಗಳನ್ನು ನಮ್ಮ ಸರ್ಕಾರ ಈಡೇರಿಸಲಿದೆ ಎಂದು ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಎಎಪಿ ಪಕ್ಷ ತಿಳಿಸಿತ್ತು ಎಂದು ಮಾತು ಆರಂಭಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತಮ್ಮ ಸರ್ಕಾರದ ಈ ಚೊಚ್ಚಲ ಯೋಜನೆಗಳನ್ನು ಘೋಷಿಸಿದರು.  
 
ದೆಹಲಿಯಲ್ಲಿ ವಾಸವಾಗಿರುವ ನಿವಾಸಿಗಳು ನಮ್ಮ ಸರ್ಕಾರದ ಲಾಭವನ್ನು ಪಡೆಯಲಿದ್ದು, ಒಂದು ತಿಂಗಳಲ್ಲಿ 400 ಯೂನಿಟ್ ವಿದ್ಯುತ್‌ಗಿಂತ ಕಡಿಮೆ ವಿದ್ಯುತ್ತನ್ನು ಯಾರು ಬಳಸುತ್ತಾರೋ ಅಂತಹವರು ಈ ಕೊಡುಗೆಗೆ ಅರ್ಹರಾಗಿದ್ದು, ಬಿಲ್ ಎಷ್ಟು ಪಾವತಿಸಬೇಕೋ ಅದರಲ್ಲಿ ಅರ್ಧ ಪಾವತಿಸಬೇಕಾಗುತ್ತದೆ. ಉಳಿದ ಅರ್ಧ ಬಿಲ್‌ನ್ನು ಸರ್ಕಾರವೇ ಭರಿಸಲಿದೆ. ಆದರೆ 400 ಯೂನಿಟ್‌ಗಿಂತಲೂ ಹೆಚ್ಚು ವಿದ್ಯುತ್ತನ್ನು ಬಳಸುವ ಕುಟುಂಬಗಳು ಸರ್ಕಾರದ ಈ ಕೊಡುಗೆಯಿಂದ ವಂಚಿತರಾಗಲಿದ್ದು, ಸಂಪೂರ್ಣ ಬಿಲ್‌ನ್ನು ಪಾವತಿಸಬೇಕಾಗುತ್ತದೆ ಎಂದು ಘೋಷಿಸಿದ್ದಾರೆ. 
 
ಬಳಿಕ ಮತ್ತೊಂದು ಯೋಜನೆಯನ್ನು ಘೋಷಿಸಿದ ಅವರು, ತಿಂಗಳೊಂದಕ್ಕೆ ದೆಹಲಿಯ ಎಲ್ಲಾ ಕುಟುಂಬಗಳೂ ಕೂಡ 20 ಸಾವಿರ ಲೀಟರ್ ಉಚಿತವಾಗಿ ಬಳಸಬಹುದಾಗಿದೆ ಎಂದು ಘೋಷಿಸಿದರು. ಈ ಯೋಜನೆಗಳು ಮಾರ್ಚ್ 1ರಿಂದ ಜಾರಿಗೆ ಬರಲಿವೆ.

ವೆಬ್ದುನಿಯಾವನ್ನು ಓದಿ