ಕೇಂದ್ರದ ವಿರುದ್ಧ ಸಮರ ಸಾರಲು ಎಎಪಿ ಸಿದ್ಧ: ಏ.22ಕ್ಕೆ ಪ್ರತಿಭಟನೆ

ಶುಕ್ರವಾರ, 3 ಏಪ್ರಿಲ್ 2015 (12:00 IST)
ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಅಂಗಿಕರಿಸಿರುವ ಭೂ ಸ್ವಾಧೀನ ಕಾಯಿದೆ-2015ನ್ನು ವಿರೋಧಿಸಿ ಏಪ್ರಿಲ್ 22ರಂದು ಕೇಂದ್ರ ಸ್ರಕಾರದ ವಿರುದ್ಧ ಪ್ರತಿಭಟನೆ ನಡೆಸಲು  ಎಎಪಿ ಮುಂದಾಗಿದೆ.
 
ಹೌದು, ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ್ಲಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ದೆಹಲಿಯ ಜಂತರ್ ಮಂತರ್‌ನಿಂದ ಪ್ರಧಾನ ಮಂತ್ರಿಗಳ ಕಚೇರಿ ವರೆಗೆ ಈ ಪ್ರತಿಭಟನಾ ಮೆರವಣಿಗೆ ಸಾಗಲಿದೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು ತಿಳಿಸಿವೆ. 
 
ಇನ್ನು ಎಎಪಿಯ ನಿರ್ಧಾರಕ್ಕೂ ಮುನ್ನವೇ ಕಾಂಗ್ರೆಸ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಇದೇ ಏಪ್ರಿಲ್ ತಿಂಗಳಲ್ಲಿ ಪ್ರತಿಭಟನೆ ಮೂಲಕ ಸಮರ ಸಾರಲಿದ್ದೇವೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಎಎಪಿ ಹಾಗೂ ಕಾಂಗ್ರೆಸ್ ಒಟ್ಟಿಗೆ ಸಮರ ಸಾರುವ ಕಾರ್ಯಗಳು ಶೀಘ್ರದಲ್ಲಿಯೇ ಗರಿಗೆದರಲಿವೆ ಎನ್ನಲಾಗಿದೆ.  
 
ಕೇಂದ್ರವು ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ತಂದಿದ್ದು, ಜ.12ರಂದು ಕಾಯಿದೆಯ ಅಡಿಯಲ್ಲಿ ಸುಗ್ರೀವಾಜ್ಞೆಯನ್ನೂ ಹೊರಡಿಸಿತ್ತು. ಆದರೆ ಈ ಕಾಯಿದೆ ಹೆಸರಿನಲ್ಲಿ ಕೇಂದ್ರ ಸರ್ಕಾರವು ರೈತರ ಫಲವತ್ತಾದ ಭೂಮಿಯನ್ನು ನಗರಾಭಿವೃದ್ಧಿ ಹೆಸರಿನಲ್ಲಿ ಕಸಿಯುವ ಯತ್ನಕ್ಕೆ ಕೈ ಹಾಕಿದೆ. ಇದು ರೈತ ವಿರೋಧಿ ಕಾಯಿದೆ ಎಂಬುದು ವಿರೋಧ ಪಕ್ಷಗಳ ಅಭಿಪ್ರಾಯವಾಗಿದ್ದು, ಇದೇ ಕೇಂದ್ರ ಸರ್ಕಾರದ  ವಿರುದ್ಧ ಸಮರ ಸಾರಲು ಕಾರಣವಾಗಿದೆ.   

ವೆಬ್ದುನಿಯಾವನ್ನು ಓದಿ