ಲಂಚ ಪ್ರಕರಣ: ಎಸಿ- ಉದ್ಯಮಿ ಸಂಭಾಷಣೆ ಆಡಿಯೋ ಬಿಡುಗಡೆ

ಶನಿವಾರ, 27 ಫೆಬ್ರವರಿ 2016 (11:48 IST)
ಚಿತ್ರದುರ್ಗ ಜಿಲ್ಲೆ ಉಪವಿಭಾಗಾಧಿಕಾರಿ ವಿರುದ್ಧದ ಲಂಚದ ಆರೋಪ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಿನ್ನೆ ಮಾಧ್ಯಮಗಳ ಜತೆ ಮಾತನಾಡುವಾಗ ಎಸಿ ತಮಗೆ ರಾಜಶೇಖರ್ ಯಾರು ಎಂದು ಗೊತ್ತೆ ಇಲ್ಲ. ನನಗೆ ಮತ್ತು ಅವರಿಗೆ ಸಂಬಂಧವಿಲ್ಲ, ಅವರು ನನ್ನನ್ನು ಭೇಟಿಯಾಗಿಯೇ ಇಲ್ಲ ಎಂದಿದ್ದರು. ಆದರೆ ಇಂದು  ಉದ್ಯಮಿ ರಾಜಶೇಖರ್ ಜತೆ ಎಸಿ ತಿಪ್ಪೇಸ್ವಾಮಿ ಮಾತನಾಡಿರುವ ಮತ್ತೊಂದು ಆಡಿಯೋ  ಬಿಡುಗಡೆಯಾಗಿದೆ. ಈ ಮೂಲಕ ಎಸಿ ರಾಜಶೇಖರ್ ಗೊತ್ತಿಲ್ಲ ಎಂದು ಹೇಳಿರುವುದು ಸುಳ್ಳೆಂದು ಸಾಬೀತಾಗಿದೆ. 
 
ಬಳ್ಳಾರಿಯ ಉದ್ಯಮಿ ರಾಜಶೇಖರ್ ಕಳೆದೆರಡು ದಿನಗಳ ಹಿಂದೆ ಎಸಿ ತಮಗೆ ಲಂಚದ ಬೇಡಿಕೆ ಇಟ್ಟಿದ್ದಾರೆಂದು ದೂರು ನೀಡಿದ್ದರು. ಲಂಚದ ಹಣದಲ್ಲಿ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಹೆಚ್. ಆಂಜನೇಯ ಮತ್ತು ಅವರ ಕಚೇರಿಯವರಿಗೂ ಪಾಲಿದೆ ಎಂದು ಎಸಿ ತಮಗೆ ಕೊಟ್ಟಿರುವ ಚೀಟಿಯಲ್ಲಿ ಬರೆದಿದ್ದಾರೆ ಎಂದು ರಾಜಶೇಖರ್ ಗಂಭೀರವಾಗಿ ಆರೋಪಿಸಿದ್ದರು.  
 
ಭೂ ಪರಿವರ್ತನೆಗೆ ತಿಪ್ಪೇಸ್ವಾಮಿ 10 ಲಕ್ಷ ರೂಪಾಯಿ ಲಂಚವನ್ನು ಕೇಳಿದ್ದಾರೆ. ಆ ಲಂಚದಲ್ಲಿ ಸಚಿವ ಮತ್ತು ಅವರ ಕಚೇರಿಯವರಿಗೆ ಎಷ್ಟೆಟ್ಟು ಪಾಲಿದೆ ಎಂಬುದನ್ನು ಎಸಿ ಚೀಟಿಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಉದ್ಯಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 
 
ಪ್ರಕರಣ ದಾಖಲಿಸಿಕೊಂಡು ಲೋಕಾಯಕ್ತ ಅಧಿಕಾರಿಗಳು ಎಸಿಯನ್ನು ಟ್ರ್ಯಾಪ್ ಮಾಡಲು ಹೋದರೆ ಅವರು ತಪ್ಪಿಸಿಕೊಂಡಿದ್ದರು. ಲೋಕಾಯುಕ್ತರ ತನಿಖೆಯ ಬಗ್ಗೆ ಕಚೇರಿಯಂದಲೇ ಮಾಹಿತಿ ಸೋರಿಕೆಯಾಗಿದ್ದು ಹೀಗಾಗಿ ಅವರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 
 
ಈ ಪ್ರಕರಣ ಕೇವಲ ಎಸಿಯ ಮೇಲಷ್ಟೇ ಅಲ್ಲ ಸಚಿವ ಆಂಜನೇಯರನ್ನು ಸಹ ಇಕ್ಕಟ್ಟಿಗೆ ಸಿಲುಕಿಸಿದೆ. ಮಾಹಿತಿ ಸೋರಿಕೆಯಾಗಿದ್ದರಿಂದ ಲೋಕಾಯುಕ್ತದಲ್ಲಿ ಸಹ ಭೃಷ್ಟ ಅಧಿಕಾರಿಗಳಿದ್ದಾರೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
 

ವೆಬ್ದುನಿಯಾವನ್ನು ಓದಿ