ಎಸಿಬಿ ಲೋಕಾಯುಕ್ತ ಎಂಬ ಶವಪೆಟ್ಟಿಗೆಗೆ ಕೊನೆಯ ಮೊಳೆ

ಮಂಗಳವಾರ, 15 ಮಾರ್ಚ್ 2016 (15:29 IST)
ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ನೂತನ ಭೃಷ್ಟಾಚಾರ ನಿಗ್ರಹ ದಳ ಸ್ಥಾಪನೆಗೆ ಸರ್ಕಾರ ಇಂದು  ಅಧಿಸೂಚನೆ ಹೊರಡಿಸಿದ್ದು, ಸುಪ್ರೀಂಕೋರ್ಟ್, ಹೈಕೋರ್ಟ್ ಸೂಚನೆಯಂತೆ ಇದರ ಸ್ಥಾಪನೆಯಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಬಿಜೆಪಿ ಲೋಕಾಯುಕ್ತ ಎಂಬ ಶವಪೆಟ್ಟಿಗೆಗೆ ಎಸಿಬಿ ರೂಪದಲ್ಲಿ ಸರ್ಕಾರ ಕೊನೆಯ ಮೊಳೆಯನ್ನು ಹೊಡೆದಿದೆ ಎಂದು ಕಿಡಿಕಾರಿದೆ. 
 
ಎಸಿಬಿ ಬಂದರೆ ಲೋಕಾಯುಕ್ತರ ಕಾರ್ಯವ್ಯಾಪ್ತಿ ಸೀಮಿತವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಸಿಎಂ ಸಿದ್ದರಾಮಯ್ಯ ಇದನ್ನು ಅಲ್ಲಗಳೆದಿದ್ದು ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಲು ಈ ಸಂಸ್ಥೆಯನ್ನು ಜಾರಿಗೆ ತರುತ್ತಿಲ್ಲ. ಸ್ವತಂತ್ರ ತನಿಖೆ ನಡೆಸಲು ಭೃಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. 
 
ಆದರೆ ಸರ್ಕಾರದ ಈ ನಿರ್ಧಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ 
ಲೋಕಾಯುಕ್ತರ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಈ ನಿರ್ಧಾರಕ್ಕೆ ಕೈ ಹಾಕಿದೆ. ಲೋಕಾಯುಕ್ತ ಶವಪೆಟ್ಟಿಗೆಗೆ ಆ್ಯಂಟಿ ಕರೆಪ್ಸನ್ ಬ್ಯುರೋ ಮೊಳೆ ಹೊಡೆದಂತೆ ಎಂದು ಗುಡುಗಿದ್ದಾರೆ. 
 
ವಿಧಾನ ಮಂಡಲದಲ್ಲಿ ದೀರ್ಘ ಚರ್ಚೆಯ ನಂತರ ಶಾಸನಬದ್ಧವಾಗಿ ಬಂದ ಲೋಕಾಯುಕ್ತಕ್ಕೆ, ಕೇವಲ ಸರ್ಕಾರಿ ಆಜ್ಞೆಯ ಮೂಲಕ ಚರಮಗೀತೆ ಹಾಡ ಹೊರಟಿರುವ ಸರ್ಕಾರದ ನಡೆ ಖಂಡನೀಯ. ಇದು ಒಳ್ಳೆಯ ಸಂಸ್ಥೆಗಳ ಬಗ್ಗೆ, ಭೃಷ್ಟಾಚಾರದ ನಿಗ್ರಹದ ವಿರುದ್ಧ ಸರ್ಕಾರ ಹೊಂದಿರುವ ಧೋರಣೆ ಏನು ಎಂಬುದನ್ನು ತೋರಿಸುತ್ತದೆ. ಮುಂಬರುವ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಮುಖವಾಡವನ್ನು ಬಹಿರಂಗ ಪಡಿಸಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. 
 
ಸರ್ಕಾರದ ಈ ನಡೆಗೆ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗುತ್ತಿದೆ.

ವೆಬ್ದುನಿಯಾವನ್ನು ಓದಿ