ವಿದ್ಯಾರ್ಥಿನಿ ಶೂಟೌಟ್ ಪ್ರಕರಣದ ಆರೋಪಿ ಮಹೇಶ್ ನಕ್ಸಲ್...?!

ಬುಧವಾರ, 8 ಏಪ್ರಿಲ್ 2015 (14:26 IST)
ವಿದ್ಯಾರ್ಥಿನಿ ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿರುವ ಅಟೆಂಡರ್ ಮಹೇಶ್.ಕೆ ಕಳೆದ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಆತನೂ ನಕ್ಸಲ್ ಆಗಿದ್ದಾನೆ ಎಂದು ವಿಚಾರಣಾನಿರತ ಪೊಲೀಸರು ಇಂದು ಸ್ಪಷ್ಟಪಡಿಸಿದ್ದಾರೆ. 
 
ಶೂಟೌಟ್ ಪ್ರಕರದಲ್ಲಿ ಆರೋಪಿಯಾಗಿರುವ ಈತ ನಕ್ಸಲ್ ನೀತಿ ನಿಯಮಗಳನ್ನು ಪಾಲಿಸುತ್ತಿದ್ದ. ಅಲ್ಲದೆ ನಕ್ಸಲ್ ಚಟುವಟಿಕೆ, ಸಭೆಗಳಲ್ಲಿಯೂ ಕೂಡ ಭಾಗಿಯಾಗಿದ್ದ. ಆತನ ಬಳಿ ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ದಿನ ಪತ್ರಿಕೆಗಳ ತುಣುಕುಗಳಿವೆ. ಆ ಮೂಲಕ ಆತ ನಕ್ಸಲ್ ಎಂದು ದೃಢಪಟ್ಟಿದೆ ಎಂದಿದ್ದಾರೆ. 
 
ಇನ್ನು ಆತನ ಬಳಿ ದಿನ ಪತ್ರಿಕೆಯ ತುಣುಕುಗಳಲ್ಲದೆ ನಕ್ಸಲ್‌ಗೆ ಸಂಬಂಧಿಸಿದ ಕರಪತ್ರಗಳು, ಭಿತ್ತಿ ಪತ್ರಗಳೂ ಕೂಡ ಇದ್ದು, ಆರೋಪಿ ನಕ್ಸಲೀಯರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಎಂಬ ಬಗ್ಗೆ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. 
 
ಆರೋಪಿಯನ್ನು ಬಂಧಿಸಿರುವ ಪೊಲೀಸರು, ಶಿವಮೊಗ್ಗ ಜಿಲ್ಲೆಯ ಆತನ ಹುಟ್ಟೂರಿಗೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಕೃತ್ಯ ಎಸಗಲು ನಿನಗೆ ಪಿಸ್ತೂಲ್ ಹೇಗೆ ಸಿಕ್ಕಿತು ಎಂಬ ವಿಷಯದ ಬಗ್ಗೆ ಆರೋಪಿ ಬಾಯಿ ಬಿಟ್ಟಲ್ಲವಾದರೂ ನಕ್ಸಲ್ ಕೈವಾಡ ಹಿನ್ನೆಲೆಯಲ್ಲಿಯೇ ಬಂದೂಕು ಸಿಕ್ಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 
 
ಬೆಂಗಳೂರಿನ ಕಾಡುಗೋಡಿಯಲ್ಲಿರುವ ಪ್ರಗತಿ ಕಾಲೇಜಿನಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಮಹೇಶ್ ಕಳೆದ ಮಾರ್ಚ್ 31ರಂದು ಇಬ್ಬರು ವಿದ್ಯಾರ್ಥಿನಿಯರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಪರಿಣಾಮ ತಮಕೂರು ಜಿಲ್ಲೆಯ ಪಾವಗಡ ಮೂಲದ ಗೌತಮಿ(18) ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದರೆ, ಮತ್ತೋರ್ವ ವಿದ್ಯಾರ್ಥಿನಿ ಶಿರಿಷಾ(18) ಗಂಭೀರವಾಗಿ ಗಾಯಗೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ