ಗೌರಿಬಿದನೂರು: ಬಡಮಹಿಳೆ ಮೇಲೆ ಎಸಿಡ್ ದಾಳಿ

ಸೋಮವಾರ, 24 ನವೆಂಬರ್ 2014 (09:17 IST)
ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಎಸಿಡ್ ದಾಳಿ ನಡೆಸಿದ ಪ್ರಕರಣ  ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಲಕ್ಷ್ಮಮ್ಮ ಎಂಬ 40 ವರ್ಷದ ಮಹಿಳೆ ಬಸ್ ಹತ್ತಲೆಂದು ಪೆಟ್ರೋಲ್ ಬಂಕ್ ಬಳಿ ಇದ್ದ ಬಸ್ ನಿಲ್ದಾಣವೊಂದರಲ್ಲಿ ನಿಂತಿದ್ದರು. ಆಗ ಬುರ್ಖಾ ಧರಿಸಿದ್ದ ಇಬ್ಬರು ಅವರ ಬಳಿ ಬಂದ ಬಂದು ಮೈಮೇಲೆ ಎಸಿಡ್ ಎರಚಿ ಪರಾರಿಯಾಗಿದ್ದಾರೆ.
 
ಪೀಡಿತಳ ಬಲಗೈ, ಭುಜ ಮತ್ತು ಕಣ್ಣಿಗೆ ಗಾಯಗಳಾಗಿದ್ದು ಅವರನ್ನು ಗೌರಿಬಿದನೂರು ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.
 
ಕೂಲಿ ಕೆಲಸ ಮಾಡಿಕೊಂಡಿರುವ ಬಡ ಮಹಿಳೆಯ ಮೇಲೆ ನಡೆದ ಈ ಅಮಾನುಷ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಪಿಯುಸಿ ಓದುತ್ತಿರುವ ಆಕೆಯ ಮಗಳನ್ನು ಮದುವೆ ಮಾಡಿಕೊಡುವಂತೆ ಕೆಲವು ಯುವಕರು ಆಕೆಗೆ ಒತ್ತಾಯಿಸಿದ್ದರು. ಆದರೆ ಆಕೆ ಓದಬೇಕೆಂಬ ಕಾರಣ ನೀಡಿ  ಮದುವೆ ಮಾಡಿಕೊಡಲು ನಿರಾಕರಿಸಲಾಗಿತ್ತು. ಈ ಕಾರಣಕ್ಕೆ ಕೋಪದಿಂದ ದುಷ್ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
 
ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕೃತ್ಯ ನಡೆದ ಸ್ಥಳದಲ್ಲಿದ್ದ ಪೆಟ್ರೋಲ್ ಬಂಕ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ  ಸೆರೆಯಾಗಿರುವ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ