ಕಿರುತೆರೆ ನಟಿ ಹೇಮಾಶ್ರೀ ಪ್ರಕರಣ: ಆರೋಪಿ ಸುರೇಂದ್ರ ಬಾಬುಗೆ ಜಾಮೀನು

ಬುಧವಾರ, 26 ಆಗಸ್ಟ್ 2015 (15:43 IST)
ಕಳೆದ 2012ರಲ್ಲಿ ನಡೆದ ಕಿರುತೆರೆ ನಟಿ ಹೇಮಾಶ್ರೀ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುರೇಂದ್ರ ಬಾಬುಗೆ ಇಂದು ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿ ಸುರೇಂದ್ರ ಬಾಬು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ನಾಳೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಹಿನ್ನೆಲೆ
 
ಪತಿ ಸುರೇಂದ್ರ ಬಂಧನ: 
ಹೇಮಾಶ್ರೀ ಸಾವಿನ ಹಿಂದೆ ಆಕೆಯ ಪತಿ ಸುರೇಂದ್ರ ಬಾಬು ಕೈವಾಡವಿದೆ ಎಂದು ಆಕೆಯ ತಾಯಿ ಲೀಲಾವತಿ ದೂರು ನೀಡಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
 
ಬಲವಂತದ ಮದುವೆ? 
ಹೇಮಾಶ್ರೀ ವಯಸ್ಸು 26 ವರ್ಷ. ಆಕೆಯ ಪತಿ ಸುರೇಂದ್ರ ಬಾಬು ವಯಸ್ಸು 48 ವರ್ಷ. ಅಂದರೆ ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಬರೋಬ್ಬರಿ 22 ವರ್ಷ. 2008ರ ಜೂನ್ 26ರಂದು ಇವರ ಮದುವೆ ನಡೆದಿತ್ತು. ಮದುವೆಯ ಮರುದಿನವೇ ಪತಿ ವಿರುದ್ಧ ತಿರುಗಿ ಬಿದ್ದಿದ್ದ ಹೇಮಾಶ್ರೀ, ಪೊಲೀಸರಿಗೆ ದೂರು ನೀಡಿದ್ದರು. ಆದರೆ ಎರಡೇ ದಿನಗಳಲ್ಲಿ ದೂರನ್ನು ವಾಪಸ್ ಪಡೆದಿದ್ದರು.
 
ಅದರ ನಂತರವೂ ಪತಿಯ ವಿರುದ್ಧ ಹಲವು ಬಾರಿ ಹೇಮಾಶ್ರೀ ದೂರಿದ್ದರು. ತನ್ನ ತಂದೆ ಬ್ಲ್ಯಾಕ್‌ಮೇಲ್ ಮಾಡಿದರು. ಮದುವೆಯಾಗದೇ ಇದ್ದರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಹೇಳಿದ್ದರು. ಹಾಗಾಗಿ ಒಲ್ಲದ ಮನಸ್ಸಿನಿಂದ ನಾನು ಸುರೇಂದ್ರ ಬಾಬುವನ್ನು ಮದುವೆಯಾಗಿದ್ದೆ. ಸುರೇಂದ್ರ ಬಾಬು ಅವರಿಗೆ ಮೊದಲೇ ಒಂದು ಮದುವೆಯಾಗಿತ್ತು ಅನ್ನೋದು ನನ್ನನ್ನು ಮದುವೆಯಾದ ನಂತರ ಗೊತ್ತಾಯಿತು ಎಂದು ಆಕೆ ದಾಖಲಿಸಿದ್ದ ದೂರೊಂದರಲ್ಲಿ ಉಲ್ಲೇಖವಿದೆ.
 
ಇಷ್ಟೊಂದು ಅಸಮಾಧಾನಗಳಿದ್ದರೂ ಆಗಾಗ ನಡೆಯುತ್ತಿದ್ದ ಸಂಧಾನಗಳಿಂದ ದಾಂಪತ್ಯದ ಬಂಡಿ ಹೇಗೋ ಮುಂದಕ್ಕೆ ಹೋಗುತ್ತಿತ್ತು. ಅವರಿಬ್ಬರು ಬನಶಂಕರಿಯ ನಿವಾಸದಲ್ಲಿ ವಾಸಿಸುತ್ತಿದ್ದರು.
 
ಬಹುಮುಖ ಪ್ರತಿಭೆ...
ಹೇಮಾಶ್ರೀ ಒಂದಲ್ಲ, ಎರಡಲ್ಲ... ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿದ್ದ ಅಪ್ಪು, ವೀರ ಪರಂಪರೆ, ಸಿರಿವಂತ, ಮರ್ಮ, ಉಗ್ರಗಾಮಿ, ವರ್ಷ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
 
ಅದಕ್ಕಿಂತಲೂ ಅವರು ಹೆಚ್ಚು ಜನಪ್ರಿಯರಾಗಿದ್ದು ಧಾರಾವಾಹಿಗಳಲ್ಲಿ. ಗೋಲ್ಡನ್ ಸ್ಟಾರ್ ಗಣೇಶ್ ಪ್ರಮುಖ ಪಾತ್ರದಲ್ಲಿದ್ದ ವಠಾರ ಧಾರಾವಾಹಿಯಿಂದ ಆರಂಭಿಸಿ ತುಳಸಿ, ಉತ್ತರಾಯಣ, ಮಹಮಾಯಿ ಸೇರಿದಂತೆ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರ ವ್ಯಾಪ್ತಿ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಟಿವಿ ಕಾರ್ಯಕ್ರಮಗಳು ಮತ್ತು ಸ್ಟೇಜ್ ಶೋ ಕಾರ್ಯಕ್ರಮಗಳ ನಿರೂಪನೆಯಲ್ಲೂ ಸೈ ಎನಿಸಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ