ಜೀವಂತ ಹೃದಯ ಬೆಂಗಳೂರಿನಿಂದ ಚೆನ್ನೈಗೆ ರವಾನೆ

ಶುಕ್ರವಾರ, 19 ಡಿಸೆಂಬರ್ 2014 (13:05 IST)
ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಹೃದಯ ಶಸ್ತ್ರ ಚಿಕಿತ್ಸೆಗಾಗಿ 8 ತಿಂಗಳ ಮಗುವಿನ ಹೃದಯವು ನಗರದ ಹೆಚ್‌ಎಎಲ್ ವಿಮಾನದಿಂದ ಚೆನ್ನೈನ ಪೋರ್ಟಿಸ್ ಆಸ್ಪತ್ರೆಗೆ ಶೀಘ್ರವೇ ರವಾನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. 
 
ಚೆನ್ನೈ ಮೂಲದ ಎರಡೂವರೆ ವರ್ಷದ ಮಗುವೊಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಚೆನ್ನೈನ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆ ಪುಟ್ಟ ಮಗುವಿನ ಶಸ್ತ್ರ ಚಿಕಿತ್ಸೆಯ ಯಶಸ್ವಿಗಾಗಿ ರಾಜ್ಯದ ಮಣಿಪಾಲ್ ಆಸ್ಪತ್ರೆಯ ವೈದ್ಯರು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. 
 
 ಬೆಂಗಳೂರು ಮೂಲದ 8 ತಿಂಗಳ ಮಗು ಮೆದುಳು ಸಂಬಂಧಿ ಕಾಯಿಲೆಗೆ ಒಳಗಾಗಿತ್ತು. ಆದರೆ ಮೆದುಳು ಪ್ರಸ್ತುತ ನಿಷ್ಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಈ ಪುಟ್ಟ ಕಂದಮ್ಮನ ಹೃದಯವನ್ನು ಅತ್ಯಾಧುನಿಕ ಚಿಕಿತ್ಸೆಯ ಮೂಲಕ ಜೀವಂತವಾಗಿ ಹೊರ ತೆಗೆದಿರುವ ವೈದ್ಯರು ಚೆನ್ನೈನ ಪೋರ್ಟಿಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಎರಡೂವರೆ ವರ್ಷದ ಮಗುವಿನ ಉಳಿವಿಗಾಗಿ ರವಾನಿಸಲಾಗುತ್ತಿದ್ದು, ಇಂದು ನಡೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಈ ಹಿನ್ನೆಲೆಯಲ್ಲಿ ಇಲ್ಲಿನ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಜೀವಂತವಿರುವ ಪುಟ್ಟ ಹೃದಯವನ್ನು ಹೊತ್ತು ವಿಶೇಷ ವಿಮಾನವೊಂದು ಶೀಘ್ರವೇ ಚೆನ್ನೈಗೆ ಪ್ರಯಾಣ ಬೆಳೆಸಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಮಣಿಪಾಲ್ ಸಮೂಹ ಸಂಸ್ಥೆ ವೈದ್ಯರ ಎರಡನೇ ಸಾಹಸ ಪ್ರಯತ್ನವಾಗಿದ್ದು, ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು.    

ವೆಬ್ದುನಿಯಾವನ್ನು ಓದಿ