ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕೋರ್ಟ್‌ಗೆ ಹಾಜರಾದ ಮಳೆ ಹುಡುಗಿ

ಸೋಮವಾರ, 27 ಏಪ್ರಿಲ್ 2015 (12:32 IST)
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಅವರು ಇಂದು ಇಲ್ಲಿನ ಎರಡನೇ ಜೆಎಂಎಪ್‌ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ಹೇಳಿಕೆ ದಾಖಲಿಸಲಿದ್ದಾರೆ.  
 
ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಈ ಹಿಂದೆ ನಟಿ ಪೂಜಾಗಾಂಧಿ ಅವರಿಗೆ ಮೂರು ಬಾರಿ ನೋಟಿಸ್ ಜಾರಿಗೊಳಿಸಿತ್ತು. ಆದರೆ ನೋಟಿಸ್ ಜಾರಿಗೊಳಿಸಿದರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಆದ್ದರಿಂದ ನ್ಯಾಯಾಲಯವು ಏಪ್ರಿಲ್ 23ರಂದು ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗಿರುವ ನಟಿ, ಮುಂದೆ ನಡೆಯುವ ಎಲ್ಲಾ ವಿಚಾರಣಾ ಹಂತಗಳಲ್ಲಿಯೂ ಭಾಗಯಾಗಲಿದ್ದೇನೆ. ಆದರೆ ತಮ್ಮ ವಿರುದ್ಧ ಹೊರಡಿಸಿರುವ ಬಂಧನ ವಾರೆಂಟ್‌ನ್ನು ಹಿಂಪಡೆಯಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.  
 
ಇನ್ನು ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ನಟಿ ಆಗಮಿಸಿದ ಕೆಲ ಕ್ಷಣ ವಿಚಾರಣೆ ನಡೆಸಿ ಬಳಿಕ ವಿಚಾರಣೆಯನ್ನು ಅರ್ಥ ಗಂಟೆಗಳ ಕಾಲ ಮುಂದೂಡಿತು. ಆದರೆ ಅದಕ್ಕೂ ಮುನ್ನ ಮತ್ತೆ ವಿಚಾರಣೆ ಆರಂಭವಾಗುವ ವರೆಗೆ ತಾವು ಕೋರ್ಟ್‌ನ ಕಟಕಟೆಯಲ್ಲಿಯೇ ಇರಬೇಕೆಂದು ಸೂಚಿಸಿತು. 
 
ಪ್ರಕರಣ ಹಿನ್ನೆಲೆ: ನಟನೆಗಷ್ಟೇ ಸೀಮಿತವಾಗಿರದೆ ರಾಜಕೀಯಕ್ಕೂ ಪಾದಾರ್ಪಣೆ ಮಾಡಿದ್ದ ನಟಿ ಪೂಜಾಗಾಂಧಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಆರ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವೇಳೆ ಪ್ರಚಾರ ವಿಷಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣದಿಂದ ಪೂಜಾ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಟಿ ಪೂಜಾಗಾಂಧಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ವಿಚಾರಣೆಗೊಳಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ