ಎಸ್.ಆರ್. ನಾಯಕ್ ವಿರುದ್ಧ ಆರೋಪಗಳಿವೆ, ಲೋಕಾಯುಕ್ತ ಹುದ್ದೆಗೆ ಬೇಡ: ಈಶ್ವರಪ್ಪ

ಮಂಗಳವಾರ, 5 ಜನವರಿ 2016 (19:05 IST)
ಕನ್ನಡಿಗರನ್ನು ಲೋಕಾಯುಕ್ತರನ್ನಾಗಿ ಮಾಡಬೇಕೆಂಬ ಒತ್ತಡವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲೋಕಾಯುಕ್ತರ ಸಂಭಾವ್ಯರ ಪಟ್ಟಿಯಲ್ಲಿ ಕನ್ನಡಿಗರ ಹೆಸರಿದ್ದು, ಈಗಾಗಲೇ ಎಲ್ಲಾ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರದಲ್ಲಿ ರಾಜ್ಯಪಾಲರಿಗೆ ಶಿಫಾರಸುಗಳನ್ನು ಕಳಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್. ನಾಯಕ್ ಅವರನ ನೇಮಕಕ್ಕೆ ಒಲವು ತೋರಿದ್ದಾರೆ. ಆದರೆ ಈಶ್ವರಪ್ಪ ಎಸ್. ಆರ್. ನಾಯಕ್ ವಿರುದ್ಧ ಹಲವಾರು ಆರೋಪಗಳಿರುವುದರಿಂದ ಅವರ ನೇಮಕ ಬೇಡವೆಂದು ಹೇಳಿದ್ದಾರೆ. ಎಸ್. ಆರ್. ಹಿರೇಮಠ್ ಕೂಡ ಎಸ್.ಆರ್. ನಾಯಕ್ ನೇಮಕಕ್ಕೆ ವಿರೋಧ ಸೂಚಿಸಿದ್ದಾರೆ.  ನಿನ್ನೆ ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲೋಕಾಯುಕ್ತ ಹುದ್ದೆಗೆ ನ್ಯಾ. ವಿಕ್ರಂಜಿತ್ ಸೇನ್ ಅವರನ್ನು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಶಿಫಾರಸು ಮಾಡಿದ್ದರು.

ಹೈಕೋರ್ಟ್ ಸಿಜೆ ಕೂಡ ವಿಕ್ರಂಜಿತ್ ಹೆಸರು ಸೂಚಿಸಿದ್ದಾರೆಂದು ಶೆಟ್ಟರ್ ಹೇಳಿದ್ದರು. ಆದರೆ ಸಿಎಂ ಹೇಳಿಕೆ ಗಮನಿಸಿದರೆ ಕನ್ನಡಿಗರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಬಹುದೆಂದು ಹೇಳಲಾಗುತ್ತಿದೆ. ಆದರೆ ಕನ್ನಡಿಗರೇ ಲೋಕಾಯುಕ್ತರಾಗುವುದು ಏಕೆ, ಭಾಷೆ ಮುಖ್ಯವೇ ಅಥವಾ ಭ್ರಷ್ಟಾಚಾರ ನಿಯಂತ್ರಣ ಮುಖ್ಯವೇ ಎಂಬ ವಾದ ಕೇಳಿಬಂದಿದೆ. ಈಗ ಲೋಕಾಯುಕ್ತ ಹುದ್ದೆಗೆ ಎಸ್.ಆರ್. ನಾಯಕ್ ಮತ್ತು ವಿಕ್ರಂಜಿತ್ ಸೇನ್ ಅವರ ಹೆಸರು ಅಂತಿಮಗೊಂಡಿದ್ದು, ಮುಖ್ಯಮಂತ್ರಿ ಯಾರ ಹೆಸರನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕು. 

ವೆಬ್ದುನಿಯಾವನ್ನು ಓದಿ