ಜಿಲ್ಲಾ ಪೊಲೀಸ್ ಆಯುಕ್ತರಿಗೆ ಸಂಸದ ಸುರೇಶ್ ಅಂಗಡಿಯಿಂದ ತರಾಟೆ

ಗುರುವಾರ, 8 ಅಕ್ಟೋಬರ್ 2015 (14:24 IST)
ಗಲಭೆ ನಿಯಂತ್ರಿಸುವಲ್ಲಿ ವಿಫಲವಾದರು ಎಂಬ ಕಾರಣದಿಂದ ಸಿಪಿಐ ರಮೇಶ್ ಗೋಕಾಕ್ ಅವರನ್ನು ಅಮಾನತುಗೊಳಿಸಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಅವರು ಇಂದು ನಗರ ಪೊಲೀಸ್ ಆಯುಕ್ತ ಎಸ್.ರವಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಹೌದು, ಸಂಸದ ಸುರೇಶ್ ಅಂಗಡಿ ಅವರು ಗೋಕಾಕ್ ಅವರನ್ನು ಕೆಲಸದಿಂದ ಅಮಾನತು ಮಾಡಿರುವ ಬಗ್ಗೆ ವಿಷಯ ತಿಳಿದು ಕಿಡಿ ಕಾರಿದ ಸಂಸದರು, ಆಯುಕ್ತರು ರಾಜಕೀಯ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಎರಡು ದಿನಗಳ ಒಳಗೆ ಅಮಾನತು ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಆಯುಕ್ತ ರವಿ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. 
 
ಇದೇ ವೇಳೆ, ಗಲಭೆ ಪ್ರಕರಣದಲ್ಲಿ ಸಾರ್ವಜನಿಕರು ಉದ್ರಿಕ್ತರಾಗಿದ್ದಾರೆ. ಆದ ಕಾರಣ ಗಲಭೆ ತಡೆಗಟ್ಟುವಲ್ಲಿ ಸಾಧ್ಯವಾಗಿಲ್ಲದಿರಬಹುದು. ಆದರೆ ಇದಕ್ಕೆ ರಾಜಕೀಯ ಬಣ್ಣ ಬಳಿದು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಅಡಿಯಲ್ಲಿ ರಮೇಶ್ ಗೋಕಾಕ್ ಅವರನ್ನು ಕೆಲಸದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ಗಲಭೆ ಸಂಬಂಧ ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದರು. 
 
ಇನ್ನು ಕಳೆದ ಸೆ.28ರಂದು ನಗರದಲ್ಲಿ ಗಲಭೆ ನಡೆದಿತ್ತು. ಆದರೆ ಈ ಗಲಭೆಯನ್ನು ನಿಯಂತ್ರಿಸುವಲ್ಲಿ ನಗರದ ಮಾರುಕಟ್ಟೆ ಠಾಣೆಯ ಸಿಪಿಐ ರಮೇಶ್ ಗೋಕಾಕ್ ಅವರು ವಿಫಲರಾಗಿದ್ದಾರೆ ಎಂಬ ಕಾರಣದಿಂದ ಆಯುಕ್ತರಾದ ಎಸ್.ರವಿ ಅವರು ನಿನ್ನೆ ಗೋಕಾಕ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಅಂಗಡಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ