ಅಕ್ಕಿ ವಿಷಯದಲ್ಲಿ ಮುಜುಗರಕ್ಕೀಡಾದ ಸಚಿವ ಆಂಜನೇಯ: ಬಾಯಲ್ಲಿ ಯಡಿಯೂರಪ್ಪ

ಸೋಮವಾರ, 27 ಏಪ್ರಿಲ್ 2015 (15:52 IST)
ರಾಜ್ಯದಲ್ಲಿ ಜಾತಿಗಣತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು ಇಂದು ನಗರಕ್ಕೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಬಗ್ಗೆ ಪರಿಶೀಲಿಸುವಾಗಿ ಮುಜುಗರಕ್ಕೊಳಗಾದ ಘಟನೆ ನಗರದ ಶಾಂತಿನಗರದಲ್ಲಿ ನಡೆದಿದೆ. 
 
ಜಾತಿಗಣತಿ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಸಚಿವರು, ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸುತ್ತಿದ್ದರು. ಈ ವೇಳೆ ಮಹಿಳೆಯೋರ್ವರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಚಿವರು ಉಚಿತವಾಗಿ ಅಕ್ಕಿ ವಿತರಿಸುತ್ತಿರುವವರು ಯಾರು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಯಡಿಯೂರಪ್ಪ ಎಂದರು. ಇದರಿಂದ ಮುಜುಗರಕ್ಕೊಳಗಾದ ಸಚಿವರು ಬಳಿಕ ಮಹಿಳೆಗೆ ಸಿದ್ದರಾಮಯ್ಯನವರು ಎಂದು ಮನವರಿಕೆ ಮಾಡಲೆತ್ನಿಸಿದರು. ಅಷ್ಟರಲ್ಲಾಗಲೇ ಮಹಿಳೆ ನನಗೆ ಮರೆತು ಹೋಗಿತ್ತು ಕ್ಷಮಿಸಿ ಎಂದು ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಎಂದರು. 
 
ಬಳಿಕ ಮಾಧ್ಯಮಗಲೊಂದಿಗೆ ಮಾತನಾಡಿದ ಸಚಿವರು, ನಮ್ಮ ಸರ್ಕಾರವು ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುತ್ತಿದೆಯಾದರೂ ಅವುಗಳ ಬಗ್ಗೆ ಮನವರಿಕೆ ಮಾಡಿವಲ್ಲಿ ನಾವು ಎಡವಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.   
 
1934ರ ಬಳಿಕ ಇದೇ ಮೊದಲ ಬಾರಿಗೆ ಜಾತಿ ಘಣತಿ ನಡೆಸಲಾಗುತ್ತಿದ್ದು, ಗಣತಿಯ ಪರಿಶೀಲನೆಗೆಂದು ಸಚಿವರು ತೆರಳಿದ್ದರು. ಈ ವೇಳೆ ಈ ಘಟನೆ ಜರುಗಿದೆ. 

ವೆಬ್ದುನಿಯಾವನ್ನು ಓದಿ