ಎಪಿಪಿ ಪರೀಕ್ಷಾ ವಿವಾದ: ದೂರು ರದ್ಧತಿಗೆ ಹೈಕೋರ್ಟ್ ನಕಾರ

ಗುರುವಾರ, 26 ಫೆಬ್ರವರಿ 2015 (18:31 IST)
ಕಳೆದ ವರ್ಷ ನಡೆದಿದ್ದ ಎಪಿಪಿ ಪರೀಕ್ಷಾ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರನ್ನು  ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಹೈಕೋರ್ಟ್, ತನಿಖೆ ಮುಂದು ವರಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಸೂಚಿಸಿದ್ದು, ದೂರು ರದ್ಧತಿಗೆ ನಿರಾಕರಿಸಿದೆ.  
 
ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರವು 2014ರಲ್ಲಿ ಸರ್ಕಾರಿ ಸಹಾಯಕ ಪ್ರಾಸಿಕ್ಯಾಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ 197 ಹುದ್ದೆಗಳನ್ನು ತುಂಬಿಕೊಳ್ಳಲು ನಿರ್ಧರಿಸಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಆದರೆ ಪರೀಕ್ಷೆಯ ಬಳಿಕ ಸಾಕಷ್ಟು ಲೋಪಗಳನ್ನು ಕಂಡು ಬಂದಿದ್ದು, ಕೆಲ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಪಾಸಾಗುವಂತಹ ಪ್ರತಿಭೆಯನ್ನು ತೋರಿದ್ದರೂ ಕೂಡ ಅವರ ಪತ್ರಿಕೆಗಳನ್ನು ತಿದ್ದಿ 
 
ಅರ್ಹತೆಗಿಂತ ಹೆಚ್ಚಿನ ಅಂಕಗಳನ್ನು ನಮೂದಿಸಿ ಅವರನ್ನು ಅರ್ಹರನ್ನಾಗಿ ಮಾಡಲಾಗಿತ್ತು. ಆದರೆ ಅಧಿಕಾರಿಗಳ ಈ ಕರಾಮತ್ತಿನಿಂದ ನಿಯತ್ತಾಗಿ ಪರೀಕ್ಷೆಯನ್ನು ಎದುರಿಸಿದ್ದ ವಿದ್ಯಾರ್ಥಿಗಳು ಬೀದಿಗೆ ಬೀಳುವ ಸಂದರ್ಭ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ನೊಂದ ವಿದ್ಯಾರ್ಥಿ ಚಂದ್ರಶೇಖರ್ ಹಿರೇಮಠ್ ಎಂಬುವವರು ನಿಷ್ಠಾವಂತ ಅಭ್ಯರ್ಥಿಗಳಿಗೆ ಪರೀಕ್ಷಾ ಫಲಿತಾಂಶದಲ್ಲಿ ಮೋಸವಾಗಿದ್ದು, ತನಿಖೆ ನಡೆಸುವ ಮೂಲಕ ತಮಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 
 
ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ತನಿಖೆಯನ್ನು ಮುಂದುವರಿಸುವಂತೆ ಸೂಚಿಸಿ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು. ಈ ಮೂಲಕ ಸರ್ಕಾರ ರದ್ಧತಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. 28 ಅಭ್ಯರ್ಥಿಗಳ ಉತ್ತರ ಪತ್ರಿಕೆಯಲ್ಲಿ ದೋಷ ಕಂಡು ಬಂದಿದೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ