ಮನೆಯಲ್ಲೇ ಕುಳಿತು ಕಂಪ್ಯೂಟರ್ ಮೂಲಕ ಎಪಿಎಲ್ ಕಾರ್ಡು ಪಡೆಯಿರಿ

ಶುಕ್ರವಾರ, 6 ಜನವರಿ 2017 (06:57 IST)
ಮನೆಯಲ್ಲೇ ಕುಳಿತು ಎಪಿಎಲ್ ಕಾರ್ಡು ಪಡೆಯುವ ಯೋಜನೆ ದೇಶದಲ್ಲೇ ಮೊದಲ ಬಾರಿ ಜಾರಿಗೆ ತರುತ್ತಿರುವ ರಾಜ್ಯ ಕರ್ನಾಟಕ ಎಂದು ಅವರು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಜ.9 ರಿಂದ ಮನೆಯಲ್ಲೇ ಕುಳಿತು ಕಂಪ್ಯೂಟರ್ ಮೂಲಕ ಎಪಿಎಲ್ ಕಾರ್ಡುಗಳನ್ನು ಪಡೆಯ ಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
 
ಅಧಿಕೃತ ಜಾಲತಾಣದಲ್ಲಿ ಎಪಿಎಲ್ ಕಾರ್ಡ್ ಪಡೆಯಲು ಪೂರಕವಾದ ಪುಟವನ್ನು ತೆರೆದುಕೊಳ್ಳಲು, ಅಗತ್ಯ ದಾಖಲೆಗಳನ್ನು ನಮೂದಿಸಲು ಸಾಧ್ಯವಾಗಲಿದ್ದು ದಾಖಲೆಗಳನ್ನು ಪೂರೈಸಿದ ತಕ್ಷಣವೇ ಎಪಿಎಲ್ ಕಾರ್ಡು ಪಡೆಯಬಹುದು ಎಂದು ಸಚಿವರು ಹೇಳಿದರು.
 
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೆ, ಜನವರಿ ಇಪ್ಪತ್ತರೊಳಗೆ ಇದೇ ಮಾದರಿಯಲ್ಲಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಬಿಪಿಎಲ್ ಕಾರ್ಡನ್ನೂ ಪಡೆಯುವ ಯೋಜನೆ ಆರಂಭವಾಗಲಿದೆ ಎಂದು ಅವರು ಪ್ರಕಟಿಸಿದರು.
 
ಬಿಪಿಎಲ್ ಗೆ ಹೊಸತಾಗಿ ಅರ್ಜಿ ಸಲ್ಲಿಸಿ: ಇದುವರೆಗೆ ಬಿಪಿಎಲ್ ಕಾರ್ಡಿಗಾಗಿ ಹತ್ತು ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರು ಹೊಸತಾಗಿ ಅರ್ಜಿ ಸಲ್ಲಿಸುವುದು ಅನಿವಾರ್ಯ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದರು.
 
ಬಿಪಿಎಲ್ ಕಾರ್ಡ್ ಪಡೆಯಲು ಆಧಾರ್ ಅನ್ನು ಕಡ್ಡಾಯ ಮಾಡಲಾಗಿದೆ. ಎಪಿಎಲ್ ಕಾರ್ಡು ಪಡೆಯುವರ ಪೈಕಿ ಒಬ್ಬರ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದರು. ಎಪಿಎಲ್ ಕಾರ್ಡ್ ಕಂಪ್ಯೂಟರ್ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದಾದ ಹದಿನೈದು ದಿನಗಳ ಒಳಗಾಗಿ ಇಲಾಖೆಯಿಂದಲೇ ಮೂಲ ಪ್ರತಿ ಸಂಬಂಧಪಟ್ಟವರ ನಿವಾಸಕ್ಕೆ ತಲುಪಲಿದೆ ಎಂದರು.
 
ಎಪಿಎಲ್ ಕಾರ್ಡ್ ಪಡೆಯಲು ವೆಬ್ ಸೈಟ್ ಬಳಸುವವರು ಕುಟುಂಬದ ಒಬ್ಬರ ಆಧಾರ್ ಕಾರ್ಡ್ ನಂಬರ್ ಕೊಡಬೇಕು. ಉಳಿದಂತೆ ಕುಟುಂಬದವರ ಸಂಖ್ಯೆಯನ್ನು ನಮೂದಿಸಬೇಕು. ವಿಳಾಸವನ್ನು ನಮೂದಿಸಬೇಕು ಎಂದು ವಿವರಿಸಿದರು.
 
ಹೀಗೆ ಅಗತ್ಯವಾದ ದಾಖಲೆಗಳನ್ನು ಒದಗಿಸಿದ ತಕ್ಷಣ ಕಂಪ್ಯೂಟರ್‍ ನಲ್ಲಿ ಎಪಿಎಲ್ ಕಾರ್ಡು ಪಡೆಯಬಹುದು. ಈ ಕಾರ್ಡ್ ಅಡಿ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿ ಗೋಧಿ ಪಡೆಯಲು ಅವಕಾಶವಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ