ಅರ್ಕಾವತಿ ದೂರು: ಮೀನಮೇಷ ಎಣಿಸುತ್ತಿರುವ ಗವರ್ನರ್ ವಜುಭಾಯಿ ವಾಲಾ

ಭಾನುವಾರ, 25 ಜನವರಿ 2015 (12:14 IST)
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ದೂರು ಸಲ್ಲಿಸುವುದಕ್ಕೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಮಯಾವಕಾಶ ನೀಡದೆ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆಯೇ?
 
ಬಿಜೆಪಿಯ ಉನ್ನತ ಮೂಲಗಳನ್ನೇ ಆಧರಿಸಿ ಹೇಳುವುದಾದರೆ ಹೌದು. ತಾವು ಬಿಜೆಪಿ ಮೂಲದವರಾಗಿರು ವುದರಿಂದ ಪಕ್ಷದವರು ಅಥವಾ ಅವರ ಬೆಂಬಲಿತ ವ್ಯಕ್ತಿ ಕೇಳಿದಾಕ್ಷಣ ಭೇಟಿಗೆ ಅವಕಾಶ ನೀಡಿದರೆ ಅದರಿಂದ ಕೆಟ್ಟ ಸಂದೇಶ ರವಾನೆಯಾಗಬಹುದು, ಅದರಿಂದ ಕೇಂದ್ರ ಸರ್ಕಾರಕ್ಕೂ ಮುಜುಗರ ಉಂಟಾಗಬಹುದು ಎಂಬ ಕಾರಣಕ್ಕಾಗಿ ಸ್ವಲ್ಪ ಕಾಲ ಬಿಟ್ಟು ದೂರು ಸಲ್ಲಿಸಲು ಅವಕಾಶ ನೀಡಲಿದ್ದಾರೆ ಎನ್ನಲಾಗಿದೆ.
 
ಪರಿಣಾಮ ಶನಿವಾರವೂ ಬಿಜೆಪಿ ಬೆಂಬಲಿತ ಸಾಮಾಜಿಕ ಕಾರ್ಯಕರ್ತ ನಟರಾಜ್‌ ಶರ್ಮ ಅವರಿಗೆ ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ. ಭಾನುವಾರ ಮತ್ತು ಸೋಮವಾರ ಸರ್ಕಾರಿ ರಜಾ ದಿನಗಳಾಗಿದ್ದರಿಂದ ಮಂಗಳವಾರ ಅಥವಾ ನಂತರ ಅವಕಾಶ ಸಿಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ.
 
ಶುಕ್ರವಾರ ತಮ್ಮ ಹುಟ್ಟುಹಬ್ಬದ ಕಾರಣ ಮುಂದೊಡ್ಡಿ ಭೇಟಿಗೆ ನಿರಾಕರಿಸಿದ್ದ ರಾಜ್ಯಪಾಲರು ಶನಿವಾರ ತುಮಕೂರು ವಿ.ವಿ. ಘಟಿಕೋತ್ಸವದ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅದನ್ನು ಬಿಟ್ಟರೆ ರಾಜಭವನದಲ್ಲೇ ಇದ್ದರೂ ತಮ್ಮ ಭೇಟಿಗೆ ಸಮಯಾವಕಾಶ ನೀಡಲಿಲ್ಲ. ಈ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ವಿಶ್ಲೇಷಣೆಗಳು ಕೇಳಿಬಂದವು.
 
ಗುರುವಾರ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ನಿವಾಸದಲ್ಲಿ ಪಕ್ಷದ ಮುಖಂಡರೊಂದಿಗೆ ಸುದೀರ್ಘ‌ ಸಮಾಲೋಚನೆ ನಡೆದ ನಂತರ ಶುಕ್ರವಾರ ದೂರು ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆರಂಭದಲ್ಲಿ ಪಕ್ಷದ ಕಾನೂನು ಘಟಕದ ವತಿಯಿಂದಲೇ ದೂರು ನೀಡಲು ತೀರ್ಮಾನಿಸಿದ್ದರೂ ನಂತರ ಶುಕ್ರವಾರ ಬೆಳಗ್ಗೆ ಹೊತ್ತಿಗೆ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಖಾಸಗಿ ವ್ಯಕ್ತಿಯಿಂದ ದೂರು ಸಲ್ಲಿಸಲು ನಿರ್ಧರಿಸಲಾಯಿತು.
 
ಸಂಘ ಪರಿವಾರದ ಮೂಲದ ನಟರಾಜ್‌ ಶರ್ಮ ಎಂಬ ಸಾಮಾಜಿಕ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ರಾಜಭವನ ಸಂಪರ್ಕಿಸಿ ತಮಗೆ ರಾಜ್ಯಪಾಲರ ಭೇಟಿಗೆ ಸಮಯ ನೀಡುವಂತೆ ಕೋರಿದ್ದರು. ಈವರೆಗೂ ರಾಜಭವನದಿಂದ ಯಾವುದೇ ಮಾಹಿತಿ ನಟರಾಜ್‌ ಅವರಿಗೆ ಬಂದಿಲ್ಲ. ಅವರೂ ಕಾಯುತ್ತಲೇ ಇದ್ದಾರೆ.
 
ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ?
 
ಅರ್ಕಾವತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸುವ ಸಂಬಂಧ ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ ಇದೆ ಎನ್ನಲಾಗಿದೆ.
 
ಈ ಕಾರಣಕ್ಕಾಗಿಯೇ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಮತ್ತು ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ ಅವರಷ್ಟೇ ಅರ್ಕಾವತಿ ವಿಚಾರವಾಗಿ ಪದೇ ಪದೇ ಪ್ರಸ್ತಾಪಿಸುತ್ತಾರೆಯೇ ಹೊರತು ಇತರ ನಾಯಕರು ಹಿಂದೆ ಸರಿದಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳಾದ ಆರ್‌.ಅಶೋಕ್‌ ಸೇರಿದಂತೆ ಬೆಂಗಳೂರಿನ ಶಾಸಕರು ಹಾಗೂ ಮುಖಂಡರು ಈ ವಿಚಾರದಿಂದ ದೂರ ಸರಿದು ನಿಲ್ಲುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದಲ್ಲಿ ತಮ್ಮ ವಿರುದ್ಧವೂ ಆರೋಪಗಳು ಕೇಳಿಬರಬಹುದು ಎಂಬ ಆತಂಕ ಕಾಡುತ್ತಿದೆ ಎನ್ನಲಾಗಿದೆ. ಆದರೆ, ಪಕ್ಷದ ಹೈಕಮಾಂಡ್‌ನಿಂದ ಅರ್ಕಾವತಿ ವಿಚಾರದಲ್ಲಿ ಗಂಭೀರ ಹೆಜ್ಜೆ ಇಡುವಂತೆ ಸೂಚನೆ ಬಂದಿರುವುದರಿಂದ ಮನಸ್ಸಿಲ್ಲದಿದ್ದರೂ ಇದಕ್ಕೆ ವಿರೋಧ ವ್ಯಕ್ತಪಡಿಸಲು ಸಾಧ್ಯವಾಗದೆ ಚಡಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
 
ರಾಜ್ಯಪಾಲರು ತುಮಕೂರು ಪ್ರವಾಸದಲ್ಲಿ ಇದ್ದುದ್ದರಿಂದ ಅರ್ಕಾವತಿ ಡಿನೋಟಿಫಿಕೇಷನ್‌ ಸಂಬಂಧ ದೂರು ನೀಡಲು ಸಾಧ್ಯವಾಗಿಲ್ಲ. ರಾಜ್ಯಪಾಲರು ಅವಕಾಶ ಮಾಡಿಕೊಟ್ಟಾಗ ಬಿಜೆಪಿ ಕಾನೂನು ಘಟಕದಿಂದ ನಟರಾಜ್‌ ಶರ್ಮಾ ದೂರು 

ವೆಬ್ದುನಿಯಾವನ್ನು ಓದಿ