ಮೌಲ್ಯಮಾಪನದಲ್ಲಿ ಅಕ್ರಮ, ಮೋಸ ಕಂಡು ಬಂದಿಲ್ಲ: ಕುಮಾರಸ್ವಾಮಿ

ಶುಕ್ರವಾರ, 22 ಮೇ 2015 (15:51 IST)
ಪಿಯು ಪರೀಕ್ಷಾ ಫಲಿತಾಂಶದಲ್ಲಿ ಗೊಂದಲದಿಂದ ಕೂಡಿದೆ ಎಂಬ ಕಾರಣದಿಂದ ವಿದ್ಯಾರ್ಥಿಗಳು ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಮೌಲ್ಯಮಾಪನದಲ್ಲಿ ಯಾವ ಅಕ್ರಮ ಅಥವಾ ಮೋಸ ಕಂಡು ಬಂದಿಲ್ಲ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. 
 
ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೇ ಖುದ್ಧು ಕಚೇರಿಯ ಒಳಗೆ ತೆರಳಿ ತಪ್ಪಿದ್ದ ಪ್ರಶ್ನೆ ಪತ್ರಿಕೆಗಳನ್ನು ತೆರೆಸಿ ಪರಿಶೀಲಿಸಿದ್ದೇನೆ. ಮೌಲ್ಯಮಾಪನದಲ್ಲಿ ಯಾವುದೇ ರೀತಿಯ ತಪ್ಪಾಗಿಲ್ಲ. ಸುಮ್ಮನೆ ವ್ಯನಸ್ಥೆಯನ್ನು ಕೆಡಿಸಲು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದೀರಾ ಎಂದು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡರು.
 
ಬಳಿಕ, ನಾನೇನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕಾರಣದಿಂದ ಬಂದಿದ್ದೇನೆ. ವಿದ್ಯಾರ್ಥಿಗಳು ಆತಂಕಪಡಬೇಕಾಗಿಲ್ಲ. ಇಲಾಖೆಯ ಅಧಿಕಾರಿಗಳು ಮನವರಿಕೆ ಮಾಡುವಲ್ಲಿ ವಿಫಲವಾಗಿದ್ದಾರೆ. ಆದರೆ ಮೌಲ್ಯಮಾಪನದಲ್ಲಾಗಲಿ ಅಥವಾ ಮಂಡಳಿಯ ಇತರೆ ಕಾರ್ಯದಲ್ಲಾಗಲಿ ಯಾವುದೇ ರೀತಿಯ ಮೋಸವಾಗಿಲ್ಲ ಎಂದರು. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. 
 
ಪಿಯುಸಿ ವಿದ್ಯಾರ್ಥಿಗಳು ಅಂಕ ನೀಡವಲ್ಲಿ ಪರೀಕ್ಷಾ ಮಂಡಳಿ ದ್ವಂದ್ವ ನೀತಿ ಅನುಸರಿಸಿದ್ದು, ನಮಗೆ ಅನ್ಯಾಯವಾಗಿದೆ. ಒಂದೊಂದು ವೆಬ್‌ಸೈಟ್‌ನಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶಿತವಾಗುತ್ತಿದೆ ಎಂದು ಆರೋಪಿಸಿ ಮಂಡಳಿಯ ವಿರುದ್ಧ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹಾಜರಾದ ಕುಮಾರಸ್ವಾಮಿ, ಸ್ವಲ್ಪ ಸಮಯದ ಬಳಿಕ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಷ್ಮಾ ಗೋಡಬಲೆ ಅವರೊಂದಿಗೆ ಚರ್ಚಿಸಿದರು. ಬಳಿಕ ಹೊರ ಬಂದ ಹೆಚ್‌ಡಿಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.   

ವೆಬ್ದುನಿಯಾವನ್ನು ಓದಿ