ಸಂಸದ ಶ್ರೀರಾಮುಲು ವಿರುದ್ಧ ಬಂಧನ ವಾರಂಟ್

ಶನಿವಾರ, 20 ಸೆಪ್ಟಂಬರ್ 2014 (16:56 IST)
ಸುಮಾರು ಮೂರು ಕೋಟಿ ರೂ. ಮೊತ್ತದ  ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮಂತ್ರಿ ಮತ್ತು ಬಳ್ಳಾರಿ ಕ್ಷೇತ್ರದ ಸಂಸದ, ಬಿ. ಶ್ರೀರಾಮುಲು ವಿರುದ್ಧ ಬೆಂಗಳೂರಿನ ಹದಿಮೂರನೇ ಎಸಿಎಂಎಂ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.

ಶ್ರೀರಾಮಲು ಸ್ಥಾಪಿಸಿದ್ದ ಬಿ.ಎಸ್.ಆರ್ ಪಕ್ಷದ ಮೈಸೂರು ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಸೋಮಣ್ಣ ಎಂಬುವರು ಕೆಲ ತಿಂಗಳುಗಳ ಹಿಂದೆ ರಾಮುಲು ವಿರುದ್ಧ ಚೆಕ್ ಬೌನ್ಸ್ ದೂರು ದಾಖಲಿಸಿದ್ದರು.
 
ಸೋಮಣ್ಣ ಅವರು ಸಂಸದ ಶ್ರೀರಾಮಲು ಅವರಿಗೆ ಈ ಹಿಂದೆ 2.96 ಕೋಟಿ ನಗದನ್ನು ಸಾಲವಾಗಿ ನೀಡಿದ್ದರು. ಕೆಲ ದಿನಗಳ ಹಿಂದೆ ಮರು ಪಾವತಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರು ಇಷ್ಟೇ ಮೊತ್ತದ ಚೆಕ್‌ ನೀಡಿದ್ದರು. ಆದರೆ, ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಮುಂದಾದ ವೇಳೆ ಆ ಚೆಕ್‌ ಬೌನ್ಸ್‌ ಆಗಿತ್ತು. ಇದರಿಂದಾಗಿ ಸೋಮಣ್ಣ ಅವರು ನಗರದ 13ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು
 
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಶ್ರೀರಾಮುಲು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಕೋರ್ಟ್ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.

ವೆಬ್ದುನಿಯಾವನ್ನು ಓದಿ