ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ: ಗರಿಗೆದರಿದ ಕಾಂಗ್ರೆಸ್‌ನಲ್ಲಿ ಸಭೆ

ಶನಿವಾರ, 24 ಜನವರಿ 2015 (15:41 IST)
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿಯೂ ಕೂಡ ಪ್ರಸ್ತುತ ಗುಲ್ಲೆಬ್ಬಿದ್ದು, ರಾಜ್ಯ ಉಸ್ತುವಾರಿ ಹೊತ್ತಿರುವ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಇಂದು ಸಭೆ ನಡೆಯಿತು. 
 
ಸಭೆಯಲ್ಲಿ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತವಾಗಿ ಚರ್ಚಿಸಿ ಕಾಂಗ್ರೆಸ್ ಪಕ್ಷದಿಂದ ಆಗಿರುವ ಎಲ್ಲಾ ಸಾಧಕ ಭಾದಕಗಳನ್ನು ಪರಿಶೀಲಿಸಲಾಯಿತು. ಅಲ್ಲದೆ ಸಿಎಂ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡದಿಂದಾಗಿ ಸರ್ಕಾರ ಹೆಲಿಕಾಪ್ಟರ್‌ಗಳ ಬಳಕೆ ಬಗ್ಗೆ ಕೈಗೊಂಡ ನಿರ್ಣಯ ಹಾಗೂ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ನಿರ್ದೇಶಕರ ಸ್ಥಾನ ಭರ್ತಿ ಸೇರಿದಂತೆ ಇನ್ನಿತರೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. 
 
ಇನ್ನು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾದೇಶಿಕ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವರು, ಶಾಸಕರೂ ಸೇರಿದಂತೆ ಪಕ್ಷದ ಇತರೆ ಗಣ್ಯರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.  
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಧಾವೆ ಹೂಡಲು ವಿರೋಧ ಪಕ್ಷವಾದ ಬಿಜೆಪಿ ಸದಸ್ಯರು ಸಮ್ಮತಿ ಪಡೆಯಲು ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಸಭೆ ಹಮ್ಮಿಕೊಂಡಿದೆ ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ