ಬಂಧನ ಹಿನ್ನೆಲೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಅಶ್ವಿನ್ ರಾವ್

ಸೋಮವಾರ, 27 ಜುಲೈ 2015 (17:43 IST)
ರಾಜ್ಯದ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್‌ ಇಂದು ಬೆಳಗ್ಗೆ ಎಸ್ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದು, ಇಂದೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. 
 
 ಅಶ್ವಿನ್ ರಾವ್ ಇಂದು ಬೆಳಗ್ಗೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಸಿಕ್ಕಿ ಬೀಳುವ ಮೂಲಕ ತನಿಖಾಧಿಕಾರಿಗಳ ಖೆಡ್ಡಾಗೆ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರ ಪರ ವಕೀಲ ಸಂದೀಪ್ ಪಾಟೀಲ್, ಇಂದೇ ನಗದರ ಲೋಕಾಯುಕ್ತ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.  
 
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇಂದು ವಿಚಾರಣೆ ನಡೆಸಿತು. ಈ ವೇಳೆ ಅಶ್ವಿನ್ ಪರ ವಾದ ಮಂಡಿಸಿದ ಪಾಟೀಲ್, ಅಶ್ವಿನ್ ರಾವ್ ಅವರನ್ನು ಇನ್ನೂ ಎಸ್ಐಟಿ ಅಧಿಕಾರಿಗಳು ಬಂಧಿಸಿಲ್ಲ. ಹಾಗಾಗಿ ಜಾಮೀನು ಮಂಜೂರು ಮಾಡಬೇಕಾಗಿ ಮನವಿ ಮಾಡಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ  ಅಭಿಯೋಜಕ ರಮೇಶ್ ಬಾಬು, ಎಸ್ಐಟಿ ಅಧಿಕಾರಿಗಳು ಅಶ್ವಿನ್‌ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಧ್ದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಪ್ರತಿವಾದ ಮಂಡಿಸಿದರು. 
 
ಇನ್ನು ಮೂಲಗಳ ಪ್ರಕಾರ, ಎಸ್ಐಟಿ ಅಧಿಕಾರಿಗಳು ಅಶ್ವಿನ್ ರಾವ್ ಅವರನ್ನು ಬಂಧಿಸಿರುವುದು ನಿಜ. ಆದರೆ ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದಲ್ಲಲ್ಲ. ಬದಲಾಗಿ ಹಾವೇರಿ ಜಿಲ್ಲೆಯ ಚನ್ನಬಸಪ್ಪ ಎಂಬುವವರು ಇಂದು ಬೆಳಗ್ಗೆ 10.35ರ ವೇಳೆಯಲ್ಲಿ ನೀಡಿದ್ದ ಮತ್ತೊಂದು ದೂರಿನ ಹಿನ್ನೆಲೆಯಲ್ಲಿ ಕ್ರೈಂ ನಂ 58 ರ ಅಡಿಯಲ್ಲಿ ಅಶ್ವಿನ್ ರಾವ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ