ಮಾದ್ಯಮದವರ ಮೇಲೆ ಹಲ್ಲೆ: ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಆಕ್ರೋಶ

ಸೋಮವಾರ, 22 ಸೆಪ್ಟಂಬರ್ 2014 (11:42 IST)
ಬೀದರ್‌‌ನಲ್ಲಿ  ಮಾಧ್ಯಮದವರ ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಆಕ್ರೋಶ ಕೇಳಿಬಂದಿದೆ. ದೂರು ದಾಖಲಿಸಲು ಬಂದಾಗ ಎಸ್.ಪಿ. ಸುಧೀರ್ ಕುಮಾರ್ ಅವರು ಉದ್ಧಟತನದಿಂದ ವರ್ತಿಸಿದರು. ಜಿಲ್ಲಾಧಿಕಾರಿ ಜಾಫರ್ ಕೂಡ ನಿರ್ಲಕ್ಷ್ಯ ವಹಿಸಿದ್ದರು. ರಾತ್ರಿ 11 ಗಂಟೆವರೆಗೂ ಪೊಲೀಸರು ದೂರು ದಾಖಲಿಸಿರಲಿಲ್ಲ ಎಂದು ಹೇಳಲಾಗುತ್ತಿದೆ. ಗೂಂಡಾಗಿರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.
 
ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಗೂಂಡಾಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಮಂತ್ರಿಗಳ ಮೇಲೆ ಹಲ್ಲೆ ನಡೆದರೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆಯೋ ಅದೇ ರೀತಿ ಮಾಧ್ಯಮದವರ ಮೇಲೆ ಹಲ್ಲೆ ನಡೆದಾಗಲೂ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.  ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಕೂಡ ಮಾಧ್ಯಮದವರ ಮೇಲೆ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 
 
ಹಸು ಎಲುಬಿನಿಂದ ಅಕ್ರಮವಾಗಿ ಡಾಲ್ಡಾ ತಯಾರಿಕೆ ಮಾಡುತ್ತಿದ್ದ ಜಾಲವನ್ನು ಕುರಿತು ವರದಿ ಮಾಡಲು ತೆರಳಿದ್ದ ನಾಲ್ವರು ಮಾಧ್ಯಮಪ್ರತಿನಿಧಿಗಳ ಮೇಲೆ ಡಾಲ್ಡಾ ತಯಾರಿಕೆ ಅಡ್ಡೆಯ 70ಕ್ಕೂ ಹೆಚ್ಚು ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿದ ವಿದ್ಯಮಾನ ಹುಮ್ನಾಬಾದ್ ಚಿಟಗುಪ್ಪಾದಲ್ಲಿ ಸಂಭವಿಸಿತ್ತು. ಚಿಟಗುಪ್ಪಾ ಗ್ರಾಮದ ಮೂರು ಅಡ್ಡೆಗಳಲ್ಲಿ  ಈ ದುಷ್ಕರ್ಮಿಗಳು ಅಕ್ರಮವಾಗಿ ಡಾಲ್ಡಾ ತಯಾರಿ ಮಾಡುತ್ತಿದ್ದರು.
 
ಈ ಜಾಲದ ಬೆನ್ನುಹತ್ತಿದ ಪತ್ರಕರ್ತರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡ ನಾಲ್ವರು ಪತ್ರಕರ್ತರನ್ನು ಆಸ್ಪತ್ರೆ
ಗೆ ಸೇರಿಸಲಾಗಿದೆ. ಪತ್ರಕರ್ತರ ಲ್ಯಾಪ್‌ಟಾಪ್, ಕ್ಯಾಮೆರಾಗಳನ್ನು ಕಸಿದುಕೊಂಡ ದುಷ್ಕರ್ಮಿಗಳು ಅವನ್ನು ಸುಟ್ಟುಹಾಕಿದ್ದರು. 
 

ವೆಬ್ದುನಿಯಾವನ್ನು ಓದಿ